History Notes-67:ಹಸರಂಗಿ ಪಾಮನಾಯಕ
History Notes-67: ಗಡ್ಡಿಲಿಂಗಪ್ಪನಾಯಕನಿಗೆ ಒಟ್ಟು ಏಳು ಜನ ಗಂಡು ಮಕ್ಕಳು. ಅವರಲ್ಲಿ ಪಾಮನಾಯಕನೂ ಒಬ್ಬ. ಅಪ್ರತಿಮ ಶೂರನಾದ ಇವನು ಮಾತ್ರ ತನ್ನ ಸಂಸ್ಥಾನವನ್ನು ಉಳಿಸಿ ಬೆಳಸಬಲ್ಲನು ಎಂದು ಭಾವಿಸಿದ ಪಿಡ್ಡನಾಯಕ ಅಣ್ಣ ತಮ್ಮಂದಿಯರ ನಡುವೆ ಉದ್ಭವಿಸಿದ ಎಲ್ಲ ವಿವಾದಗಳನ್ನು ಮರೆತು ಅವನನ್ನು ದತ್ತಕ ತಗೆದುಕೊಂಡ.
ಮತ್ತು ತನ್ನ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ. ಅವನ ಮರಣಾ ನಂತರ ಪಾಮನಾಯಕ ಅಧೀಕೃತವಾಗಿ ಗದ್ದುಗೆಯನ್ನೇರಿದ. ಪಾಮನಾಯಕನೂ ಮುಂದೆ ತನ್ನ ಪ್ರಾಬಲ್ಯವನ್ನು ಮೆರೆದು ವಿಜಯಪುರ ಮತ್ತು ಮೊಗಲ್ ದೊರೆಗಳಿಂದ ಖಿಲ್ಲತ್ತು, ಜಹಗೀರು ಮುಂತಾದವುಗಳನ್ನು ಪಡೆದು ಹೆಸರುವಾಸಿಯಾಗುತ್ತಾನೆ.
ಈ ಬೇಡದೊರೆಗಳು ತಮ್ಮ ಸಂಸ್ಥಾನದ ಏಳಿಗೆಯನ್ನೇ ಪ್ರಬಲವಾಗಿ ಅವಲಂಬಿಸಿದವರು. ಯಾರ ವೈರವನ್ನು ಕಟ್ಟಿಕೊಳ್ಳದೆ. ಯಾರು ತಮಗೆ ಅನುಕೂಲ ಮಾಡಿಕೊಡುವರೋ; ಅವರ ಪರ ನಿಲ್ಲುವವರು. ಹೆಚ್ಚು ಕೊಟ್ಟವರ ಕಡೆ ಇವರ ಒಲವು ಹೆಚ್ಚು.
ಆಗಿನ ಕಾಲದಲ್ಲಿ ಜಹಗೀರು ಹಾಕಿಕೊಡುವುದು ಎಂದರೆ; ತಮ್ಮ ಆಧೀನಕ್ಕೊಳಪಟ್ಟಿರುವ ಪ್ರದೇಶವನ್ನು ಶೇಕಡಾವಾರು ಒಕ್ಕಲಿಗೆ ಹಾಕಿದಂತೆ. ಆ ಪ್ರದೇಶದಿಂದ ವಸೂಲಿಯಾಗುವ ಆಯವನ್ನು ಗಮನದಲ್ಲಿ ಇರಿಸಿಕೊಂಡು ದಹಜ ಅಥವಾ ಚೌತಾಯಿ ಎನ್ನುವ ಹೆಸರಿನಲ್ಲಿ ಆಳುವ ಮೂಲರಸರಿಗೆ ಹಣವನ್ನು ಸಂದಾಯ ಮಾಡಬೇಕಿತ್ತು.
ದಹಜ ಎಂದರೆ ಶೇಕಡಾ ಹತ್ತರಷ್ಟು ಪ್ರಮಾಣ. ವಿಜಯಪುರದವರಿಗೆ ಈ ಬೇಡರಸರು ಅವರ ಭಾಗದ ಪ್ರದೇಶಗಳಿಂದ ಕಂದಾಯ ರೂಪದಲ್ಲಿ ಬಂದ ಆದಾಯದಲ್ಲಿ ಶೇಕಡಾ ಹತ್ತು ಪ್ರಮಾಣದಲ್ಲಿ ಸಂದಾಯ ಮಾಡಿದ್ದೂ ಉಂಟು ಮತ್ತು ಕಾಲಕ್ಕನುಗುಣವಾಗಿ ತಾವು ಬಲಿಷ್ಠರಾದಾಗ ಅವರಿಂದ ಅಷ್ಟು ಪ್ರಮಾಣದಲ್ಲಿ ಆಯ ಪಡೆದುದ್ದು ಉಂಟು. ಮರಾಠಾ ಪೇಶ್ವಗಳಂತೂ ಅವರ ಆಧೀನದಲ್ಲಿರುವ, ಬೇಡರಸರ ಪ್ರಾಂತ್ಯಕ್ಕೆ ಸನಿಹ ಇರುವ ಪ್ರದೇಶಗಳ ಆದಾಯದಲ್ಲಿ ಶೇಕಡಾ ಇಪ್ಪತ್ತೈದು ಪಡೆಯುತ್ತಿದ್ದರು.
ಇದನ್ನೇ ಚೌತಾಯಿ ಎಂದು ಕರೆಯುತ್ತ ಬರಲಾಗಿದೆ. ಧನಧಾಹಿಗಳಾದ ಪೇಳ್ವೆಗಳು ಮೈಸೂರಿನ ಸರದಾರ ಹೈದರಲಿ ಮತ್ತವನ ಮಗ ಟಿಷ್ಟೂ ಸುಲ್ತಾನನಿಂದಲೂ ಇದೇ ತರಹ ಅವರ ಒಟ್ಟು ಆಯದಲ್ಲಿ ಚೌತಾಯಿಯನ್ನು ವಸೂಲಿ ಮಾಡುತ್ತಿದ್ದರು. ಮುಂದೆ ವಿಜಯಪುರದ ಆರಸರಿಂದಲೂ; ಸುರಪುರದ ಅರಸರಿಂದಲೂ ಅವರು ಚೌತಾಯಿ ಪಡೆದದ್ದು ಉಂಟು.
ಪಾಮನಾಯಕನಿಗೆ ಹಸರಂಗಿ ಪಾಮನಾಯಕ ಎಂದು ಹೆಸರು ಸ್ಥಿರವಾಗಿ ನಿಲ್ಲುವುದಕ್ಕೆ ಒಂದು ಕಾರಣವೂ ಇದೆ. ಅವನು ಹಸಿರು ಬಣ್ಣದ ಅಂಗಿಯನ್ನು ತೊಟ್ಟು ಮೊಗಲ್ ಮತ್ತು ವಿಜಯಪುರದ ಸುಲ್ತಾನರ ದರ್ಬಾರಗಳಿಗೆ ಹಸಿರು ಪಲ್ಲಕ್ಕಿಯಲ್ಲಿ ಕುಳಿತು ತೆರಳಿತ್ತಿದ್ದನಂತೆ. ಪ್ರಯುಕ್ತ ಅವನನ್ನು ಸಾಮಾನ್ಯ ಜನ ಹಸಿರಂಗಿ ಪಾಮನಾಯಕ ಎನ್ನುವ ಉಪನಾಮದೊಂದಿಗೆ ಕರೆಯಲಾರಂಭಿಸಿದರು.
ಪಾಮನಾಯಕ ಸಿಂಹಾಸನವನ್ನು ಏರಿದ ಮೇಲೆ ಯಥಾರೀತಿ ವಾಗಣಗೇರಿಯನ್ನೇ ರಾಜಧಾನಿಯನ್ನಾಗಿ ಮುಂದುವರೆಸಿಕೊಂಡು ತನ್ನ ಆಳ್ವಿಕೆಯನ್ನು ಆರಂಭಿಸಿದ. ಅಲ್ಲಿ ನೂತನ ಆಡಳಿತ ಕಚೇರಿಯನ್ನು ತೆರೆದ. ಅಂಥ ಕಚೇರಿಗಳಿಗೆ ಈ ತರಹದ ಹೆಸರುಗಳೂ ಬಂದವು : ಗುರಿಕಾರ, ಸರನೌಬತ್, ಸರ್ ಹವಾಲ್ದಾರ, ಸಬವನೀಸ್, ಗರಡಿಸವಾರಿ, ಹದ್ದುದಖನಿ, ಹುಂಡೇಕಾರ, ಮರಾಥೇಶ್ವರ, ಸುಬೇದಾರ ಮೊದಲಾದವುಗಳು.
ಪಾಮನಾಯಕನಲ್ಲಿ ಹನ್ನೆರಡು ಸಾವಿರ ನುರಿತ ಸೈನ್ಯ ಪಡೆ ಇತ್ತು. ಈ ಸೈನ್ಯಕ್ಕೆ ವಾಗಣಗೇರಾ, ಸಗರ, ಶಹಾಪೂರ ಮೊದಲಾದೆಡೆ ನೆಲೆಗಳನ್ನು ಒದಗಿಸಲಾಗಿತ್ತು. ಈ ಸೈನ್ಯ ದಕ್ಷಿಣ ಭಾರತದಲ್ಲೇ ಗೆರಿಲ್ಲಾ ಯುದ್ಧದಲ್ಲಿ ಪ್ರಸಿದ್ಧಿ ಪಡೆದಿತ್ತು.
ಪಾಮನಾಯಕ ವಾಗಣಗೇರಿಯಲ್ಲಿ ಮತ್ತೊಂದು ನೂತನ ಕೋಟೆ ಕಟ್ಟಿಸಿ ಅದರ ಮೇಲೆ ನಾಲ್ಕು ತೋಪುಗಳನ್ನು ಇಡಿಸಿದ. ವಿಜಯಪುರವನ್ನು ಮಿತೃತ್ವದ ಸಂಕೇತವಾಗಿ ಉಳಿಸಿಕೊಂಡು ಆಗಾಗ ಸೈನ್ಯದೊಂದಿಗೆ ಅಲ್ಲಿಗೆ ಭೇಟಿಕೊಡುತ್ತಿದ್ದ. ವಿಜಯಪುರದ ಬಾದಶಹನ ಪರವಾಗಿ ಆನೇಕ ಯುದ್ಧಗಳಲ್ಲಿ ಭಾಗವಹಿಸಿ ಗೆಲುವುಗಳನ್ನು ತಂದುಕೊಟ್ಟಿದ್ದ.
ಪಾಮನಾಯಕನ ಕಾಲದಲ್ಲಿ ವಿಜಯಪುರ ಸಂಸ್ಥಾನದಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗುತ್ತವೆ. ದೊರೆ ಅಲಿ ಆದಿಲಶಹಾ ಅರ್ಧಾಂಗವಾಯು ಪೀಡಿತನಾಗಿ ಸಾವು ಬದುಕಿನ ಮಧ್ಯ ನರಳಾಡುತ್ತ ಐದು ತಿಂಗಳವರೆಗೆ ಬದುಕಿರುತ್ತಾನೆ.
ಇನ್ನು ತಾನು ಬದುಕಿ ಉಳಿಯುವುದು ಸಾಧ್ಯವಿಲ್ಲವೆಂದು ತಿಳಿದು ಅವನು ತನ್ನ ನಾಲ್ಕು ವರ್ಷದ ಮಗನಾದ ಅಲಿ ಆದಿಲಶಹಾನಿಗೆ ಪಟ್ಟಗಟ್ಟಿ ಆಬ್ದುಲ ಮಹಮ್ಮದನನ್ನು ವಜೀರನನ್ನಾಗಿಸಿ ವಿಜಯಪುರವನ್ನು ಸಂರಕ್ಷಿಸುವ ಹೊಣೆಯನ್ನು ಅವನ ಹೆಗಲಿಗೆ ವರ್ಗಾಯಿಸಲು ಇಚ್ಛಿಸುತ್ತಾನೆ.
ಅಬ್ದುಲಮಹಮ್ಮದನು ಇದಕ್ಕೊಪ್ಪದೆ ರಾಜ್ಯಾಡಳಿತವನ್ನು ನಾಲ್ಕು ಭಾಗಮಾಡಿ ಪೂರ್ವೋತ್ತರ ಭಾಗವನ್ನು ಮೊಗಲರ ದಾಳಿಯಿಂದ ಸಂರಕ್ಷಿಸಲು ತಾನುಳಿಯುತ್ತಾನೆ ಮತ್ತು ಪಶ್ಚಿಮಭಾಗವನ್ನು ಮರಾಠಾ ಶಿವಾಜಿಯಿಂದ ಸಂರಕ್ಷಿಸುವುದಕ್ಕಾಗಿ ಬಹಲೂಲಖಾನನನ್ನು ರಾಜ್ಯದ ದಕ್ಷಿಣಭಾಗದ ಸಂರಕ್ಷಣೆಗೆ ಮುಜಫರಖಾನನನ್ನು ನಿಯೋಜಿಸುತ್ತಾನೆ.
ಮತ್ತು ದಖನಿಪರ ಮುಖಂಡನಾದ ಖವಾಸಖಾನನು ವಜೀರನಾಗಿದ್ದು ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಕಾಪಾಡಬೇಕೆಂದು ಸೂಚಿಸುತ್ತಾನೆ. ಆದಿಲಶಹಾ ಸಾಯುವ ಪೂರ್ವದಲ್ಲಿಯೇ ವಿಜಯಪುರ ಸರದಾರರಲ್ಲಿ ಅಧಿಕಾರದ ಕಾರಣಕ್ಕಾಗಿ ಒಳಜಗಳಗಳು. ಆರಂಭವಾಗುತ್ತವೆ.
ಸ್ವಾರ್ಥ ಸಾಧಕರಾದ ಸರದಾರದಲ್ಲಿ ಹಲವರು ವಿಜಯಪುರದ ವಿರುದ್ಧ ತಿರುಗಿ ಬಿದ್ದು ತಮ್ಮ ಲಾಭವನ್ನು ನೋಡಿಕೊಳ್ಳುತ್ತಾರೆ. ಬಾದಶಹಾನ ಮರಣಾ ನಂತರ ಖವಾಸಬಾನನು ವಜೀರನಾಗುತ್ತಾನೆ. ರಾಜ್ಯದ ಇತರ ಸರದಾರರಿಗೆ ಇವನು ಸಂಸ್ಥಾನದ ಆಧೀನದ ಯಾವ ಕೋಟೆಗಳನ್ನೂ ಒಪ್ಪಿಸುವುದಿಲ್ಲ.
ಇದರಿಂದ ರೊಚ್ಚಿಗೆದ್ದ ಅಬ್ದುಲಮಹಮ್ಮದನು ದರಬಾರ ತೊರೆದು ಹೊರಟು ಹೋಗುತ್ತಾನೆ. ಸಿಂಹಾಸನದ ಮೇಲೆ ಕುಳಿತಿರುವವನು ಚಿಕ್ಕ ಬಾಲಕ, ರಾಜ್ಯದ ವಜೀರನು ಸ್ವಾರ್ಥಿ ಮತ್ತು ಅಯೋಗ್ಯನು, ಸುತ್ತಮುತ್ತ ಶತ್ರುಗಳು- ಹೀಗಾಗಿ ರಾಜ್ಯದ ಎಲ್ಲೆಡೆಯಲ್ಲಿಯೂ ಒಂದರ್ಥದಲ್ಲಿ ಆರಾಜಕತೆಯೇ ನೆಲೆಸುತ್ತದೆ.
ಜೊತೆಗೆ ಯಾವಾಗಲೂ ವಿಜಯಪುರದ ಸಂಸ್ಥಾನದ ಮೇಲೆ ಮರಾಠಾ ಶಿವಾಜಿ ಮತ್ತು ಮೊಗಲ್ ಔರಂಗಜೇಬನ ಹದ್ದಿನ ಕಣ್ಣುಗಳು ಬೇರೆ. ಸಂಸ್ಥಾನವನ್ನು ಹೇಗಾದರೂ ಮಾಡಿ ದಕ್ಕಿಸಿಕೊಳ್ಳುವ ತಂತ್ರಗಳಲ್ಲಿ ಅವರಿಬ್ಬರೂ ತೊಡಗಿಕೊಂಡಿರುತ್ತಾರೆ, ಖವಾಸಖಾನನು ಒಂದು ಯೋಚನೆ ಮಾಡುತ್ತಾನೆ. ಬಲಿಷ್ಠರಾದ ಮೊಗಲರನ್ನು ಎದುರಿಸಿ ಹೋರಾಡಿ ಗೆಲ್ಲುವುದು ಕಷ್ಟವೇ. ಔರಂಗಜೇಬ ಮಹಾ ಹಠವಾದಿ ಸುಲ್ತಾನ.
ಅವನು ಕಣ್ಣಿಟ್ಟ ಯಾವ ಸಾಮ್ರಾಜ್ಯವೂ ಸುಖವಾಗಿ ಉಳಿಯದು. ಸಂಸ್ಥಾನ ಉಳಿಸಿಕೊಳ್ಳುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ರಕ್ತ ಸಂಬಂಧದ ಮೂಲಕ ಅವನನ್ನು ಬಾಂಧವ್ಯದಲ್ಲಿ ಕಟ್ಟಿ ಹಾಕುವುದು. ಹೇಗೂ ವಿಜಯಪುರದ ಗದ್ದುಗೆಯ ಮೇಲೆ ಕುಳಿತ ದೊರೆಗೆ ಹರೆಯಕ್ಕೆ ಬಂದ ಓರ್ವ ಸುಂದರಿ ಸಹೋದರಿ ಇದ್ದಾಳೆ. ಅವಳನ್ನು ಔರಂಗಜೇಬನ ಮಗನಿಗೆ ನಿಖಾ ಮಾಡಿಕೊಟ್ಟರೆ ಈ ವೈರವನ್ನು ನೀಗಬಹುದು ಎಂದು ಭಾವಿಸಿ ಕಾರಿ ತತ್ಪರನಾಗುತ್ತಾನೆ.
ಸಿಕಂದರ್ ಆದಿಲಶಹಾನ ಹಿರಿಯ ಸಹೋದರಿ ಬಾದಶಹ ಬೇಗಂ ಹದಿನಾರು ವರ್ಷದ ಪ್ರಾಯದವಳು. ಅವಳು ತಾನು ಷಿಯಾ ಪಂಥದವಳಾಗಿದ್ದು ಸುನ್ನಿ ಪಂಥದ ಔರಂಗಜೇಬನ ಮಗನೊಂದಿಗೆ ನಿಖಾ ಮಾಡಿಕೊಳ್ಳುವುದು ಹೇಗೆ ಸಾಧ್ಯ? ಎಂದು ವಾದಿಸುತ್ತಾಳೆ.
ಖವಾಸಖಾನ ಮತ್ತು ಸರದಾರಲ್ಲಿ ಓರ್ವನಾದ ಮಸೂದನು ಇವಳಿಂದ ತನಗೆ ಮುಕ್ತ ಆಡಳಿತ ನಡೆಸುವುದರಲ್ಲಿ ಅಪಾಯವಿದೆ ಎಂದು ಅರಿತು ಅವಳನ್ನು ವಿಜಯಪುರದಿಂದ ಸಾಗಹಾಕಲು ಹಿತೋಪದೇಶದ ಮಾರ್ಗ ಹಿಡಿಯುತ್ತಾನೆ :
“ನೀನು ಮೊಗಲ್ ಜನಾನಾ ಸೇರದಿದ್ದರೆ ನಿನ್ನ ತಮ್ಮನ ದರಬಾರ ನಡೆಯುವುದು ಕಠಿಣವಾಗುತ್ತದೆ. ಔರಂಗಜೇಬ ರಾಜ್ಯದ ಮೇಲೆ ಯುದ್ಧ ಸಾಂದರೆ ನಾವು ಅವನನ್ನು ಎದುರಿಸಿ ಗೆಲ್ಲುವುದು ಅಷ್ಟು ಸುಲಭ ಸಾಧ್ಯವೇ? ಈ ಸಂಬಂಧ ಏರ್ಪಡಿಸುವುದರಲ್ಲಿಯೇ ಸಂಸ್ಥಾನಕ್ಕೆ ಲಾಭವಿದೆ.
ನೀವು ತಿಳಿದವರು, ಸಹೋದರ ಸುಲ್ತಾನರ ಉನ್ನತ ಭವಿಷ್ಯದ ಕಾಳಜಿಯಿಂದಲಾದರೂ ಅವರೊಡನೆ ರಕ್ತ ಸಂಬಂಧ ಬೆಳೆಸುವುದರಲ್ಲಿ ಬುದ್ಧಿವಂತಿಕೆ ಇವೆ: ಯೋಚಿಸಿ ನೋಡಿ”
ಬೇಗಂ ಯೋಚಿಸಿ ಕಿರಿಯ ಸಹೋದರನ ತಲೆಯ ಮೇಲೆ ಗಿಡುಗನಂತೆ ಸದಾ ಭೀತಿಯನ್ನೇ ಉಂಟು ಮಾಡುತ್ತಿರುವ ಯುದ್ಧವೆಂಬ ಆಪತ್ತಿನ ನಿಗ್ರಹಕ್ಕೆ ಇದೇ ಸೂಕ್ತ ಮಾರ್ಗವೆಂದು ಭಾವಿಸಿ ತನಗೆ ನಿಖಾ ಮಾಡಿಕೊಳ್ಳಲು ಮನಸ್ಸಿಲ್ಲದಿದ್ದರೂ ಒಪ್ಪಿಕೊಳ್ಳುತ್ತಾಳೆ.
ಬಾದಶಹಾ ಬೇಗಂ ಕೇವಲ ಸುಂದರಳು ಮಾತ್ರ ಅಲ್ಲ; ಅವಳು ರಾಜಕಾರಣದಲ್ಲಿ ಮುತ್ಸದ್ದಿಯೂ ಆಗಿದ್ದಳು. ಗದ್ದುಗೆಯ ಮೇಲಿರುವ ಸುಲ್ತಾನ ಸಹೋದರನಿಗೆ ಹಲವು ಬಗೆಯಲ್ಲಿ ಸಹಾಯ ಮಾಡುವವಳು, ಅಗತ್ಯವಾದಾಗಲೆಲ್ಲ ಪ್ರೀತಿಯಿಂದ ಹಿತೋಪದೇಶ ಮಾಡುವವಳೂ ಆಗಿದ್ದಳು.
ಆದರೇನು; ಯುದ್ಧವೆಂಬ ಮಹಾಮಾರಿಯ ಬೆದರಿಕೆಯನ್ನು ಶಾಶ್ವತವಾಗಿ ತಮ್ಮನ ಅರಸೊತ್ತಿಗೆಯಿಂದ ವಿಮುಖ ಮಾಡಲು ನನ್ನ ಬಲಿ ಕೊಡುವುದು ಅನಿವಾರವಿದೆ ಎಂದು ಭಾವಿಸಿಯೇ ಅವಳು ಮೊಗಲರೊಂದಿಗೆ ಸಂಬಂಧ ಬೆಸೆಯಲು ಸಿದ್ಧಳಾಗುತ್ತಾಳೆ.
ಅವಳ ಬುದ್ಧಿವಂತಿಕೆ ಮತ್ತು ಪ್ರೀತಿಯ ಕಾರಣದಿಂದ ಹಲವು ಜನ ಸರದಾರರ ವಿಶ್ವಾಸಕ್ಕೆ ಪಾತ್ರಳಾದವಳು. ಅವಳು ವಿವಾಹವಾಗಿ ಮೊಗಲರ ಜನಾನಾ ಸೇರಿದ ಮೇಲೆ ಅವರೆಲ್ಲ ವಿಜಯಪುರ ದರ್ಬಾರದಿಂದ ಕ್ರಮೇಣ ದೂರ ಸರಿಯುತ್ತಾರೆ. ಆದರೆ ವಾಗಣಗೇರಿಯ ಪಾಮನಾಯಕ ಮಾತ್ರ ತನ್ನ ನಿಷ್ಠೆಯನ್ನು ಯಥಾರೀತಿ ಮುಂದುವರೆಸುತ್ತಾನೆ. ವಿಜಯಪುರಕ್ಕೆ ಸಂಕಷ್ಟ ಬಂದಾಗಲೆಲ್ಲ ಅದರ ನೆರವಿಗೆ ಒದಗುತ್ತಾನೆ.
ದಖನಿ ಸರದಾರನಾದ ಖವಾಸಖಾನನು ಹನ್ನೆರಡು ವರ್ಷಗಳ ಕಾಲ ಚತುರತೆಯಿಂದ ರಾಜ್ಯಾಡಳಿತವನ್ನು ಮುನ್ನಡೆಸುತ್ತಾನೆ. ವಿಜಯಪುರದಲ್ಲಿ ಯಾವಾಗಲೂ ಈ ದಖನಿ ಮತ್ತು ವಿದೇಶಿ ಅಥವಾ ಪರದೇಶಿ ಸರದಾರರ ನಡುವೆ ವೈಮನಸ್ಸುಗಳು ಇದ್ದವುಗಳೇ, ದಖನಿ ಎಂದರೆ ದಕ್ಷಿಣ ಭಾಗದಲ್ಲಿಯೇ ಹುಟ್ಟಿ ಬೆಳೆದು ಇದೇ ನೆಲವಾಸಿಯಾದ ಮುಸಲ್ಮಾನ ಸರದಾರರು.
ಪರದೇಶಿ ಅಥವಾ ವಿದೇಶಿ ಎಂದರೆ ಹೊರದೇಶ ಅಪಘನ್, ಬಹಮನ್, ತುರ್ಕಿಸ್ಥಾನ ಮೊದಲಾದ ಕಡೆಯಿಂದ ಬಂದು ಈ ದೇಶದ ಅರಸರಲ್ಲಿ ಸೈನ್ಯದ ಸೇವೆಗೆ ಸೇರಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡು ಸರದಾರರಾಗಿ ಮುಂದೆ ವಜೀರ್ ಬಾದಶಹಾಗಳಾಗುವ ಮಟ್ಟಕ್ಕೆ ಬೆಳೆದವರು.
ಹೊರಗಿನಿಂದ ಬಂದವರಿಗೆ ಇಲ್ಲಿನ ಸುಲ್ತಾನರಲ್ಲಿ ತುಸು ಮನ್ನಣೆ ಹೆಚ್ಚು. ಅವರಿಗೆ ಆಡಳಿತದಲ್ಲಿ ಉನ್ನತ ಹುದ್ದೆಗಳು ಬಹಳ ಸರಳವಾಗಿ ಲಭ್ಯವಾಗುತ್ತಿದ್ದವು. ಈ ಕಾರಣದಿಂದ ಅವರು ಮೇಲುರಿಮೆ ಬೆಳಸಿಕೊಂಡು ಇಲ್ಲಿನ ದಖನಿಗಳೊಂದಿಗೆ ಅಂತರ ಕಾಯ್ದುಕೊಳ್ಳುತ್ತಿದ್ದರು.
ಮತ್ತು ಅವರು ನಮಗಿಂತ ನಿಮ್ಮ ಸ್ಥರದವರು ಎಂಬ ಭಾವನೆಯನ್ನು ಬೆಳೆಸಿಕೊಂಡಿದ್ದರು. ಈ ಕಾರಣಕ್ಕಾಗಿ ಈ ಎರಡೂ ಬಣಗಳ ನಡುವೆ ಸಂಘರ್ಷ, ಒಳಪಿತೂರಿಗಳು ಇದ್ದದ್ದೇ. ಇವರನ್ನು ನಿಯಂತ್ರಿಸುವುದು ಒಮ್ಮೊಮ್ಮೆ ಸಿಂಹಾಸನದ ಮೇಲೆ ವಿರಾಜಮಾನನಾದ ದೊರೆಯಿಂದಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಪಠಾಣರು ಮತ್ತು ಅರಬರು ಹಾಗಲ್ಲ; ಕಾಳು ತುಂಬಿರುವ ತೆನೆಗಳನ್ನು ಅರಸುವ ಹಕ್ಕಿಗಳಂತೆ ಅವರು ಯಾರ ಗೊಡವೆಗೂ ಹೋಗದೆ ತಮಗೆ ಅನ್ನ ದೊರೆಯುವ ಮೂಲಗಳಿಗೆ ಸದಾ ನಿಷ್ಠರಾಗುವವರು.
ವಿಜಯಪುರ ರಾಜ್ಯದಲ್ಲೂ ದಖನಿ ಮತ್ತು ಪರದೇಶಿ ಅಥವಾ ವಿದೇಶಿ ಹಾವಳಿ ಅತಿ ಹೆಚ್ಚಿತ್ತು ಹಿರಿಯ ಮತ್ತು ರಾಜ್ಯಾಡಳಿತದಲ್ಲಿ ಅನುಭವಸ್ಥನಾದ ಖವಾಸಖಾನ ದಖನಿ ಆಗಿದ್ದು ಇಲ್ಲಿನ ಎಲ್ಲ ದಖನಿ ಸರದಾರರ ಮೇಲೆ ತನ್ನ ಹಿಡಿತವನ್ನು ಸಾಧಿಸಿಕೊಂಡು; ತಾನೇ ಅವರ ನಾಯಕನೆಂದು ಬಿಂಬಿಸಿಕೊಂಡು ವಿಜಯಪಮರದ ವಜೀರನಾಗಿ ಆಡಳಿತ ನಡೆಸುತ್ತಿದ್ದ.
ಮುಂದೆ ಕಾಲಾಂತರದಲ್ಲಿ ಅಲಿ ಆದಿಲಶಾಹನ ಸಾವಿನ ನಂತರ ಅಧಿಕಾರದ ಸ್ಥಾನಗಳನ್ನು ಹಿಡಿಯುವಲ್ಲಿ ವಿಫಲರಾದವರು ಹೊರ ಹೋಗಿ ಪುನಃ ಸೈನ್ಯ ದಾಳಿಯ ಮೂಲಕ ವಿಜಯಪುರದ ಆಡಳಿತವನ್ನು ತಮ್ಮ ಸುಪರ್ದಿಗೆ ತಗೆದುಕೊಳ್ಳಲು ಯತ್ನಿಸುತ್ತಿದ್ದರು.
ಅವನ ಮನಸ್ಸಿನಲ್ಲಿ ವಿಜಯಪುರವನ್ನು ಕಬಳಿಸುವ ದುರಾಶೆ ಮತ್ತೆ ಹೆಡೆಯಾಡುತ್ತದೆ. ಹೀಗಾಗಿ ಅವನಲ್ಲಿ ಖತರನಾಕ್ ಸೇನಾನಾಯಕ ಎಂದೇ ತನನ್ನು ಬಿಂಬಿಸಿಕೊಂಡಿದ್ದ ದಿಲೇರಖಾನನನ್ನು ದೊಡ್ಡ ಸೈನ್ಯದೊಂದಿಗೆ ದಕ್ಷಿಣದೆಡೆಗೆ ಕಳುಹಿಸಿ
ಹೀಗಾಗಿ ಇಲ್ಲಿ ವಜೀರ ಸ್ಥಾನಗಳು ಆಗಾಗ ರಕ್ತಸಿಕ್ತ ಹೋರಾಟದ ನಂತರ ಬದಲಾಗುತ್ತಿದ್ದವು. ಆದರೂ ವಾಗಣಗೇರಿಯ ಪಾಮನಾಯಕ ಮಾತ್ರ ವಿಜಯಪುರದ ದೊರೆ ಮತ್ತು ವಜೀರರೊಂದಿಗೆ ನಿಷ್ಠೆಯಿಂದ ಇದ್ದು ತನ್ನ ಪ್ರದೇಶವನ್ನು ಸುರಕ್ಷಿತವಾಗಿ ಇರಿಸಿಕೊಂಡಿದ್ದ.
ಅವರು ಕರೆದಾಗಲೆಲ್ಲ ಹೋಗಿ ಅವರ ವಿಶ್ವಾಸವನ್ನು ಗಳಿಸಿಕೊಂಡಿದ್ದಲ್ಲದೆ; ಯುದ್ಧಕ್ಕೆ ಆಹ್ವಾನ ಬಂದಾಗ ಸೈನ್ಯದೊಂದಿಗೆ ಅವರು ಕರೆದತ್ತ ತೆರಳಿ ಅವರಿಗೆ ಗೆಲುವು ತಂದುಕೊಟ್ಟು ಅವರಿಂದ ಬಳುವಳಿಗಳನ್ನು, ಇನಾಮುಗಳನ್ನು ಪಡೆದು ಹಿಂದಿರುಗುತ್ತಿದ್ದ, ಜೊತೆಗೆ ಪಾಮನಾಯಕನ ವಾಗಣಗೇರಾ ಸಂಸ್ಥಾನದ ಎಲ್ಲ ಜಹಗೀರುಗಳಲ್ಲಿ ಬಚ್ಚುತೇಕ ವಿಜಯಪುರದ ಬಾದಶಹಾನಿಂದ ದೊರೆತವುಗಳೇ ಆಗಿರುವುದರಿಂದ; ಅವನು ವಿಜಯಪುರದ ಸಂಸ್ಥಾನದ ಮೇಲೆ ನಿಷ್ಠೆಯನ್ನು ಹೊಂದಿರುತ್ತಾನೆ.
ಆ ಕಾರಣಕ್ಕಾಗಿ ಹಲವು ಬಾರಿ ಆಪತ್ತುಗಳನ್ನು ತನ್ನ ಮೈಮೇಲೆಯೇ ಎಳೆದುಕೊಳ್ಳುತ್ತಾನೆ. ಸಿದ್ದಿ ಮಸೂದ ತಂಬಲ್ ಎನ್ನುವ ಸರದಾರ ವಿಜಯಪುರದ ವಿರುದ್ಧ ತಿರುಗಿ ಬಿದ್ದು ಸಂಸ್ಥಾನದ ಹಲವು ಪ್ರದೇಶಗಳನ್ನು ವೈರಿಗಳ ಪಾಲು ಮಾಡುತ್ತಾನೆ. ಅವನನ್ನು ದಂಡಿಸಲು ಶೇಖಮಿನಾಜ ಜೊತೆಗೆ ಪಾಮನಾಯಕನೂ ಸೈನ್ಯವನ್ನು ತಗೆದುಕೊಂಡು ಹೊರಡುತ್ತಾನೆ.
ಅವನೊಂದಿಗೆ ದೊಡ್ಡ ಮಟ್ಟದ ಹೋರಾಟ ನಡೆಯುತ್ತದೆ. ಪಾಮನಾಯಕನ ಅನೇಕ ವೀರರು ರಣರಂಗದಲ್ಲಿ ಕಲಿತನದಿಂದ ಕಾದಾಡಿ ವೀರ ಮರಣವನ್ನು ಹೊಂದುತ್ತಾರೆ. ಇದು ಸಾಮಾನಾಯಕನಿಗೆ ಸಹಸಲಿಕ್ಕಾಗದ ನೋವು ಆ ವೀರರಲ್ಲಿ ಹಲವರು ಅವನ ಎಡ ಬಲವಿದ್ದು ಪ್ರತಿ ಸಮರದಲ್ಲೂ ಅವನಿಗೆ ಹುಮ್ಮಸ್ಸು ತುಂಬಿದವರು.
ಯುದ್ಧದಲ್ಲಿ ಅವರಿಲ್ಲ ಎಂದರೆ ಶತ್ರುಗಳೊಡನೆ ಹೋರಾಡಿ ಗೆಲ್ಲುವುದು ಅಷ್ಟು ಸುಲಭದ ಕಾವ್ಯವಲ್ಲ ಎಂಬುದು ಅವನಿಗೆ ತಿಳಿದಿತ್ತು. ಅವರೂ ಸಮರ ಭೂಮಿ ಕ್ರೀಡಾಂಗಣವಲ್ಲ: ಅಲ್ಲಿ ಸಾವು ನೋವುಗಳು ಸಹಜವೇ. ಸತ್ತವರನ್ನು ಮರೆತು ಮುನ್ನುಗ್ಗದಿದ್ದರೆ ದೊರೆಯಾಗಿ ಉಳಿಯುವುದು ಹೇಗೆ? ಪಾಮನಾಯಕ ತರುಣ
ಸೈನಿಕರ ಮಧ್ಯವೇ ನುರಿತ ಸೇನಾನಾಯಕರನ್ನು ಹುಡುಕುತ್ತಾನೆ. ಹೆಕ್ಕಿ ತಗೆದು ತನ್ನ ಸೈನ್ಯವನ್ನು ಬಲಿಷ್ಠಗೊಳಿಸಿಕೊಳ್ಳುತ್ತಾನೆ. ಸಮರಭೂಮಿಯಲ್ಲಿ ಅದೆಷ್ಟೋ ಜನ ನುರಿತ ಸಿಪಾಯಿಗಳನ್ನು ಕಳೆದುಕೊಂಡ ಕಾರಣದಿಂದ ಪರಿಹಾರಾರ್ಥವಾಗಿ ವಿಜಯಪುರದ ಸುಲ್ತಾನ ಪಾಮನಾಯಕನಿಗೆ ಕಸಬೆ ಫಿರೋಜಾಬಾದ್, ಹೊನಗುಂಟಿ, ಬೆಳಗುಂಪಿ ಮೊದಲಾದ ಗ್ರಾಮಗಳನ್ನು ಇನಾಮು ರೂಪದಲ್ಲಿ ಕೊಡುತ್ತಾನೆ.
ಕಲಬುರ್ಗಿಯಲ್ಲಿ ಸರದಾರನಾಗಿದ್ದ, ಹಿಂದೊಮ್ಮೆ ವಿಜಯಪುರದ ಆಡಳಿತಕ್ಕೂ ಸೇರಿದ್ದ ಸಿದ್ದಿಮಸೂದ ತಂಬಲನು ದಿಲ್ಲಿಯ ಔರಂಗಜೇಬನ ಸಹಾಯ ಪಡೆದು ಕನಕಗಿರಿಯ ಉಡಚನಾಯಕನ ಬೆಂಬಲದೊಂದಿಗೆ ವಿಜಯಪುರದ ಅರಸರ ಮೇಲೆ ಬಂಡಾಯವನ್ನು ಸಾರಿದ.
ವಿಜಯಪುರದ ಬಾದಶಹನ ಕೋರಿಕೆಯ ಮೇರೆಗೆ ಪಾಮನಾಯಕನು ಅವನ ಮೇಲೆ ದಂಡೆತ್ತಿ ಹೋಗಿ ಬಗ್ಗು ಬಡೆಯುತ್ತಾನೆ. ಆ ಕಾರಣದಿಂದ ದೇವದುರ್ಗ ಕಿಲ್ಲೆಯನ್ನೂ ಕಲಬುರ್ಗಿ ಸರದೇಶಗತಿಯನ್ನು ವಿಜಯಪುರದ ಅರಸು ಪಾಮನಾಯಕನ ಆಧೀನಕ್ಕೆ ಕೊಡುತ್ತಾನೆ.
ಭೀಮಾನದಿ ಮಳೆಗಾಲದಲ್ಲಿ ತುಂಬಿ ಹರಿಯುವ ಜೀವನದಿಯಾಗಿದ್ದು; ಕಲಬುರ್ಗಿಯಿಂದ ಸಗರನಾಡಿಗೆ ಅಥವಾ ವಿಜಯಪುರಕ್ಕೆ ಬರುವ ಮತ್ತು ಹೋಗುವಾಗ ಅದನ್ನು ದಾಟಲು ಅನುಕೂಲವಾಗುವ ‘ಕಾಲುಹೊಳೆ’ ಹರಿಯುವ (ನೀರಿನ ತೆಳು ಹರಿವು ಇರುವ ನದಿಭಾಗ) ಸ್ಥಳಗಳಲ್ಲಿನ ಪ್ರಮುಖ ಗ್ರಾಮಗಳಾದ ಕಸಬೆ ಫಿರೋಜಬಾದೆ, ಹೊನಗುಂಟ, ಬೆಳಗುಂಪಿಗಳನ್ನು ವೈರಿಗಳ ನುಸುಳುವಿಕೆಯನ್ನು ತಡೆಗಟ್ಟಲು ಸುರಕ್ಷತೆಯ ಹಿನ್ನೆಲೆಯಲ್ಲಿ ಪ್ರಬಲನಾದ ಪಾಮನಾಯಕ ಅವನ್ನು ವಿಜಯಪುರದ ಅರಸನಿಂದ ಇನಾಮು ಗ್ರಾಮಗಳನ್ನಾಗಿ ಪಡೆಯುತ್ತಾನೆ.
ಈ ಮಧ್ಯ ಹಲವಾರು ತಂತ್ರ ಕುತಂತ್ರಗಳನ್ನು ಮಾಡಿ ವಿಜಯಪುರ ವಜೀರನಾದ ಖವಾಸಖಾನನ್ನು ಸಿದ್ಧಿಮಸೂದ್ ಕೊಲ್ಲಿಸುತ್ತಾನೆ. ಮತ್ತು ಬಹಲೂಲಖಾನನು ಮರಣ ಹೊಂದಿದ ನಂತರ ವಿಜಯಪುರದ ವಜೀರನಾಗಿ ನೇಮಕಗೊಂಡ ಸಿದ್ಧಿಮಸೂದನು ದಿಲ್ಲಿಯ ಮೊಗಲರಿಗೆ ರಾಜ್ಯದ ಖಜಾನೆಯನ್ನು ಬರಿದು ಮಾಡಿ ಹನ್ನೊಂದು ಲಕ್ಷ ಖಂಡಣಿಯನ್ನು (ಕಪ್ಪ) ಕೊಟ್ಟು ಅವರಿಂದ ವಿಜಯಪುರದ ರಕ್ಷಣೆಗೆ ಮುಂದಾಗುತ್ತಾನೆ.
