Piddanayaka- ಇತಿಹಾಸದ ನೋಟ್ಸ್-02

Piddanayaka- ಇತಿಹಾಸದ ನೋಟ್ಸ್-02

Piddanayaka-ವಿಜಯಪುರ ಆದಿಲ್‌ಶಹಾನ ಕಾಲದಲ್ಲಿದ್ದ ಗಡ್ಡಿಪಿಡ್ಡನಾಯಕನು ತಂದೆ ಜಕ್ಕಪ್ಪ ದೇಸಾಯಿಯ ಮರಣದ ನಂತರ ಅಣ್ಣನಾದ ಲಿಂಗಪ್ಪನಾಯಕನಿಂದ ಬೇರೆಯಾಗಿ ಅವ್ವಮ್ಮ ಮತ್ತು ಹಣಮವ್ವನಾಗತಿ ಎಂಬ ಇಬ್ಬರು ಪತ್ನಿಯರೊಂದಿಗೆ ವೀರಗೊಟ್ಟ ಎನ್ನುವ ಸ್ಥಳಕ್ಕೆ ಬರುತ್ತಾನೆ.

ಆನಂತರ ತನ್ನ ಹಲವು ಜನ ಸೈನಿಕ ಸರದಾರ ಪರಿವಾರದೊಂದಿಗೆ ಜಾಲಿಬೆಂಚಿಯಲ್ಲಿ ನೆಲೆಸಿದನು. ಅಲ್ಲಿಂದ ಪುಂಡನಕಲ್ಲು ಎಂಬ ನೆಲೆಯಲ್ಲಿ ಒಂದು ವರ್ಷ ನಿಂತು ಸಿದ್ದಿಮಿಯಾ ಎಂಬ ಬಾದಶಹನ ಅಮಲ್ದಾರನ ಮೇಲೆ ಏರಿ ಹೋಗಿ ಅವನನ್ನು ಕೊಂದು; ಅವನು ಹೊಂದಿದ ಎಲ್ಲ ಕುದುರೆಗಳನ್ನು ತನ್ನ ವಶ ಮಾಡಿಕೊಂಡನು.

ಮರುವರ್ಷವೇ ಕನೈಕೋಳೂರಲ್ಲಿ ವಾಸಿಸುತ್ತಿದ್ದ ಮುಸ್ತಾಫಖಾನ ಎಂಬ ಅಮಲ್ದಾರನ ಮೇಲೆ ಸಮರ ಸಾರಿ ಅವನನ್ನು ಭಾಗಾನಗರ(ಹೈದರಾಬಾದ)ದವರೆಗೆ ಓಡಿಸಿದನು. ಆ ಮೇಲೆಯೂ ಮಾಲಗತ್ತಿಯ ಅಮಲ್ದಾರನನ್ನು ವಿಜಯಪುರಕ್ಕೆ ಓಡಿಸಿ ಅವನ ಪ್ರದೇಶವನ್ನು ತನ್ನಹಿಡಿತಕ್ಕೆ ತಗೆದುಕೊಂಡನು. ಪುಂಡನಕಲ್ಲಿನಿಂದ ಸಿಂಗನವಟ್ಟಲು, ದೇವರಕಲ್ಲು, ಕೊಳ್ಳನ ಮಡುವಿಗೆ ಬಂದು ನೆಲೆಸಿದನು. ಆಗ ಬೈಚನಾಳ ಸಮತಿನ ಕರ್ಶಿಹಳ್ಳಿಯನ್ನು ವಾಗಣಗೇರಿ ಎಂದು ಪುನರ್‌ನಾಮಕರಣ ಮಾಡಿ ಅದಕ್ಕೊಂದು ಕೋಟೆಯನ್ನು ಕಟ್ಟಿಸಿದನು.

ವಾಗಿನಗೇರಿಯಲ್ಲಿ ಕೋಟೆ ಕಟ್ಟಿ ಆಳ್ವಿಕೆ ಆರಂಭಿಸಿದ ಪಿಡ್ಡನಾಯಕನು ಐದುನೂರು ಕುದುರೆಗಳನ್ನು ಸಂಪಾದಿಸಿದ. ನಾಲ್ಕು ಸಾವಿರ ಕಾಲಾಳುಗಳ ವೀರಪಡೆಯನ್ನು ಹೊಂದಿದ. ತದನಂತರ ಶಹಾಪುರದ ಸನಿಹದ ಸಗರಕಿಲ್ಲೆಯ ಮೇಲೆ ದಾಳಿ ಮಾಡಿ ಕಿಲ್ಲೇದಾರನನ್ನು ಓಡಿಸಿ ಅದನ್ನು ತನ್ನ ಕೈವಶ ಮಾಡಿಕೊಂಡ. ಹೀಗೆ ಗಡ್ಡಿಪಿಡ್ಡನಾಯಕನ ಪರಾಕ್ರಮ ಎಲ್ಲೆಲ್ಲು ಚರ್ಚೆಗೆ ಗ್ರಾಸವಾಯಿತು. ಸುತ್ತಮುತ್ತಲಿನ ದೂರದ ದೊರೆಗಳು ಇವನ ಕುರಿತು ಯೋಚಿಸುವಂತಾಯಿತು. ಹಲವರು ಬೆದರಿದರು.

ಕೆಲವರು ಅವನನ್ನು ಮುಗಿಸುವ ಕುರಿತು ಆಲೋಚಿಸಿದರು. ವಿಜಯಪುರದ ದೊರೆ ಆದಿಲಶಾಹಿ ಗಡ್ಡಿಪಿಡ್ಡನಾಯಕನನ್ನು ಸೋಲಿಸಿ ಸೆರೆ ಹಿಡಿಯಲು, ಸಾಧ್ಯವಾಗದಿದ್ದರೆ ಕೊಂದು ಹಾಕಲು ಯೋಚಿಸಿ ಓರ್ವ ಸರದಾರನ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ವಾಗಿನಗೇರಿಯ ಕೋಟೆಯ ಮೇಲೆ ದಾಳಿ ಮಾಡಲು ಕೊಟ್ಟು ಕಳುಹಿಸಿದನು.

ರಾಜಾಗಡ್ಡಿಪಿಡ್ಡನಾಯಕನನ್ನು ಸೋಲಿಸಿಯೇ ತೀರುತ್ತೇನೆ ಎಂದು ಪಣ ತೊಟ್ಟು ಬಂದವನು ಅವನೆದುರು ಕಾದಾಡಿ ಸೋತು ಸುಣ್ಣವಾದನು.

ಅವಮಾನಕ್ಕೆ ಅ ತನ್ನ ದೊಡ್ಡ ಸೈನ್ಯ ಗಡ್ಡಿ ಪಿಡ್ಡನಾಯಕನ ಸಣ್ಣ ಸೈನ್ಯದ ಎದುರು ಸೋತು ಓಡಿ ಬಂದಿದ್ದನ್ನು ಕಂಡು ವಿಜಯಪುರದ ಸುಲ್ತಾನ ಆದಿಲಶಾಹಿ ಒಳಗೊಳಗೇ ಭೀತಿಯಿಂದ ಕಂಪಿಸಿದನು. ಅವನ ಒರಟು ವೀರ ಪಡೆಯೊಂದಿಗೆ ಕಾದಾಡಿ ಗೆಲ್ಲಲು ಯತ್ನಿಸಿ ಒಂದೊಮ್ಮೆ ಸೋಲುತ್ತಲೇ ಹೋದರೆ ಇತರ ವೈರಿ ದೊರೆಗಳ ಮುಂದೆ ಅವಮಾನಕ್ಕೆ ಕಾರಣವಾಗುತ್ತದೆ ಎಂದು ಭಾವಿಸಿ ಹೇಗಾದರೂ ಸರಿಯೇ, ಕುತಂತ್ರದಿಂದಲಾದರೂ ಅವನನ್ನು ಇಲ್ಲಿಗೇ ಕರೆಯಿಸಿಕೊಂಡು ಕೊಲ್ಲಿಸಬೇಕೆಂದು ನಿರ್ಧರಿಸಿ ತನ್ನ ಸರದಾರರೊಂದಿಗೆ ಪರಾಮರ್ಶೆ ಮಾಡಿದನು. ಆದಿಲಶಾಹಿಯ ಸೈನ್ಯದಲ್ಲಿ ಮದೋನ್ಮತ್ತ ಆನೆಯೊಂದಿತ್ತು. ಆನೆ ಸಹನಶೀಲತೆಗೆ ಹೆಸರಾದರೂ; ಅದು ಮದೋನ್ಮತ್ತವಾಗಿದ್ದಾಗ ಹೆಂಡ ಕುಡಿಸಿ ವೈರಿಯ ಮೇಲೆ ಏರಿ ಬಿಟ್ಟರಾಯಿತು; ಅದು ಅವನನ್ನು ತನ್ನ ಸೊಂಡಿಲಲ್ಲಿ ಎತ್ತಿ ಒಗೆದು ಕಾಲಿನಿಂದ ಹೊಸಕಿ ಹಾಕಿ ಕೊಂದು ಉರುಳಿಸುತ್ತದೆ ಎಂಬುದನ್ನು ಮನಗಂಡು ಗಡ್ಡಿಪಿಡ್ಡನಾಯಕನ ಮೇಲೆ ಆನೆಯ ಮೂಲಕವೇ ದಾಳಿ ಮಾಡಿಸಲು ಮಸಲತ್ತು ಮಾಡಿದನು. ಅವನನ್ನು ಸುಮ್ಮನೆ ಕರೆಸುವುದು ಹೇಗೆ? ಆದಿಲಶಾಹಿಗೆ ಒಂದು ಯೋಚನೆ ಹೊಳೆಯಿತು. ತನ್ನ ವೀರತನ ಮತ್ತು ಸೈನ್ಯದ ಸಾಮರ್ಥ್ಯದ ಮೇಲೆ ಅಪಾರವಾದ ಗರ್ವವನ್ನು ಹೊಂದಿದ ಪಿಡ್ಡನಾಯಕನಿಗೆ ಮದ್ದಾನೆಯನ್ನು ಸೋಲಿಸುವ ಪಂಥಾಗ್ದಾನವನ್ನು ಕೊಟ್ಟು ಕರೆಯಿಸಿ ಸಾಯಿಸಬೇಕು ಎಂದು ಯೋಚಿಸಿ ಆಹ್ವಾನ ಪತ್ರವೊಂದನ್ನು ಅವನಿಗೆ ಕೊಟ್ಟು ಕಳುಹಿಸಿದ.

ಆ ಪತ್ರದಲ್ಲಿ ಹೀಗೆ ಬರೆಯಲಾಗಿತ್ತು

ಗಡ್ಡಿಪಿಡ್ಡನಾಯಕರೇ;

ನಿಮ್ಮ ಶೌಲ್ಯದ ಕುರಿತು ನಾವು ಕೇಳಿಯೂ ಬಲ್ಲೆವು ಮತ್ತು ನಿಮ್ಮ ಮೇಲೆ ದಂಡೂ ಕಳುಹಿಸಿ ಸೋಲಿನ ರುಚಿಯನ್ನು ಉಂಡೂ ಬಲ್ಲೆವು. ವೀರತನವನ್ನು ಅಪಮಾನಿಸಬಾರದು, ಗೌರವಿಸಬೇಕೆಂದು ಹಿರಿಯರು ಹೇಳುತ್ತಾರೆ. ಹೀಗಾಗಿ ನಿಮ್ಮ ಪರಾಕ್ರಮವನ್ನು ಇನ್ನೊಮ್ಮೆ ಪರೀಕ್ಷಿಸಿ ನೀವು ವಿಜಯಿ ಆದದ್ದು ನಿಜವೇ ಆದರೆ ನಿಮಗೆ ದೊಡ್ಡ ಪ್ರಮಾಣದ ಪಾರಿತೋಷಕವನ್ನಿತ್ತು ಗೌರವಿಸಬೇಕು ಎಂದು ನಾವು ನಿರ್ಧರಿಸಿದ್ದೇವೆ. ನಮ್ಮಲ್ಲೊಂದು ಮದ್ದಾನೆ ಇದೆ. ಅದು ಮದೋನ್ಮತ್ತತೆಯಲ್ಲಿ ಘೀಳಿಡುತ್ತ ನಮಗೆ ಸಾಕಷ್ಟು ತೊಂದರೆ ಕೊಡುತ್ತಿದೆ. ಅದರ ಹುಚ್ಚು ನೆತ್ತಿಗೇರಿದ್ದು ಅದನ್ನು ನಾವೇ ಕೊಲ್ಲಿಸಬೇಕೆಂದು ನಿರ್ಧರಿಸಿದ್ದೇವು.

ಆದರೆ ಅದಾರೋ ನಿಮ್ಮ ಪರಾಕ್ರಮದ ಕುರಿತು ನಮ್ಮ ಮುಂದೆ ಬಹಳ ಹೊಗಳಿ ನಮ್ಮ ಸ್ಮರಣೆಯನ್ನು ಪುನಃ ಕೆದಕಿದರು. ನೀವು ಅದಾಗಲೇ ಒಮ್ಮೆ ನಮ್ಮ ದೊಡ್ಡ ಸೈನ್ಯವನ್ನು ಪರಾಜಯಗೊಳಿಸಿ ನಿಮ್ಮ ವೀರತನದ ಪರಿಚಯ ನಮಗೆ ಮಾಡಿಕೊಟ್ಟಿರುವಿರಿ. ಹೀಗಾಗಿ ನಿಮ್ಮ ಪರಾಕ್ರಮದ ಪರಿಚಯ ನಾವೇ ಖುದ್ದು ಮಾಡಿಕೊಳ್ಳುವುದಕ್ಕಾಗಿ ಮತ್ತು ನಿಮ್ಮೊಂದಿಗೆ ಸ್ನೇಹವನ್ನು ಸಂಪಾದಿಸುವುದಕ್ಕಾಗಿ ಅತ್ಯಾತುರರಾಗಿದ್ದು; ನೀವು ನಮ್ಮ ಮತ್ತುಭರಿತ ಮದ್ದಾನೆಯನ್ನು ಮಣಿಸಿದರೆ ನಮ್ಮ ಸ್ನೇಹಕ್ಕೂ ಅರ್ಹರಾಗುತ್ತೀರಿ.

ಜೊತೆಗೆ ನಾವೂ ನಿಮ್ಮ ಆ ಗೆಲುವಿಗೆ ಪಾರಿತೋಷಕ ರೂಪದಲ್ಲಿ ಒಂಭತ್ತು ಲಕ್ಷ ದಿನಾರಗಳನ್ನು ಸಮರ್ಪಿಸುವುದಲ್ಲದೆ ನಮ್ಮ ಭೂಮಿಯ ಬಹುಭಾಗವನ್ನು ನಿಮಗೆ ಇನಾಮು ರೂಪದಲ್ಲಿ ಕೊಡಲಾಗುವುದು.

-ಬಾದಶಹಾ ಆದಿಲಶಾಹಿ.

ವಿಜಯಪುರದ ಸುಲ್ತಾನ ಆದಿಲಶಾಹಿ ಗಡ್ಡಿಪಿಡ್ಡನಾಯಕ ವಿಜಯಪುರ ಬಾದಶಹಾನಿಂದ ಬಂದ ಪಂಥಾವ್ಹಾನದ ಪತ್ರವನ್ನು ಓದಿಸಿ ಕೇಳಿದ. ಗೆದ್ದರೆ ಒಂಭತ್ತು ಲಕ್ಷ ದಿನಾರಗಳು..!! ಮೇಲೆ ಭೂಮಿ ಸೀಮೆಗಳ ಅಧಿಕಾರತ್ವ..!! ಒಂದೊಮ್ಮೆ ಸೋತರೆ ವೀರಮರಣ..!! ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು. ಸೋಲು ಗೆಲುವುಗಳು ನಮ್ಮ ಆಧೀನದೊಳಗಿಲ್ಲ. ಅವುಗಳು ನಮ್ಮ ಸಾಮರ್ಥ್ಯವನ್ನು ಅವಲಂಬಿಸಿವೆ.

ವೀರನಾದವನು ಮತ್ತೊಬ್ಬ ವೀರನ ಆಹ್ವಾನವನ್ನು ತಿರಸ್ಕರಿಸಿದರೆ ಇಡೀ ಲೋಕವೇ ಅವನೊಬ್ಬ ಹೇಡಿ ಎಂದು ಹೀಯಾಳಿಸುತ್ತದೆ. ಒಂದೊಮ್ಮೆ ಹೋರಾಡಿ ಸೋತರು ಅವನೋರ್ವ ವೀರ ಎಂದು ಸ್ಮರಿಸಿ ಗುಣಗಾನ ಮಾಡುತ್ತದೆ. ಹೇಡಿಯಂತೆ ಬದುಕುವುದಕ್ಕಿಂತ ಹೋರಾಡಿ ಗೆಲುವಿನ ಅದೃಷ್ಟ ಪರೀಕ್ಷೆ ಮಾಡುವುದು ಉತ್ತಮವೆಂದು ಬಗೆದು; ತನ್ನವರೊಂದಿಗೆ ಸಮಾಲೋಚಿಸಿ; ಅವರ ಸಹಮತಿಯೊಂದಿಗೆ ಗಡ್ಡಿಪಿಡ್ಡನಾಯಕ ಆದಿಲಶಾಹಿಯ ಆಹ್ವಾನವನ್ನು ಸ್ವೀಕರಿಸಿ ಪತ್ರ ಹೊತ್ತು ಬಂದವನನ್ನು ಸತ್ಕರಿಸಿ; ಅವನ ಕೈಗೆ ‘ಪಂಥಾಹ್ವಾನ ಸ್ವೀಕಾರ ಪತ್ರ’ವನ್ನು ಇತ್ತು ವಿಜಯಪುರಕ್ಕೆ ಬೀಳ್ಕೊಟ್ಟನು.

ಗಡ್ಡಿಪಿಡ್ಡನಾಯಕ ವಿಜಯಪುರಕ್ಕೆ ಹೊರಡುವ ಮೊದಲು ನಿತ್ಯ ಭೀಷಣ ಕಸರತ್ತಿಗೆ ತೊಡಗಿದನು. ತನ್ನಲ್ಲಿರುವ ಆನೆಗೆ ಹೆಂಡ ಕುಡಿಸಿ ಅದರ ಮತ್ತೇರಿಸಿ ಅದರೊಂದಿಗೆ ಹೋರಾಡಿದನು. ಮೊದಲು ಒಂದು ಆನೆ, ಆನಂತರ ಎರಡು ಆನೆಗಳೊಂದಿಗೆ ಅವನ ವೀರಕ್ರೀಡೆ ನಡೆದವು. ಎರಡು ವಾರಗಳ ಗಜಕ್ರೀಡೆಯ ನಂತರ ಅವನು ಎಲ್ಲ ರೀತಿಯಿಂದಲೂ ಸನ್ನದ್ದನಾಗಿ ಅದೆಂಥ ಮದ್ದಾನೆಯಾದರೂ ಸರಿಯೇ; ಸೋಲಿಸಿಯೇ ಬಿಡುವೆ ಎನ್ನುವ ಆತ್ಮ ವಿಶ್ವಾಸದೊಂದಿಗೆ ವಿಜಯಪುರಕ್ಕೆ ಹೊರಡಲು ಸಿದ್ಧನಾದನು.

ನಿಗದಿತ ದಿನ ವಾಗನಗೇರಿಯ ಮಹಾಬೇಡ, ವೀರ ಗಡ್ಡಿಪಿಡ್ಡನಾಯಕ ಆಯ್ದ ಹದಿನೈದು ನೂರು ಜನ ವೀರಸೈನಿಕರೊಂದಿಗೆ ವಿಜಯಪುರದೆಡೆಗೆ ಪಯಣವನ್ನು ಆರಂಭಿಸಿದನು.

ವಿಜಯಪುರದ ನಿಗದಿತ ಮೈದಾನದಲ್ಲಿ ಗಜಕಾಳಗಕ್ಕೆ ಅನುಕೂಲವಾಗುವಂತೆ ವಿಶಾಲವಾದ ಸಮತಟ್ಟಾದ ಬಯಲು ಭೂಮಿಯೊಂದನ್ನು ಸಿದ್ಧಪಡಿಸಲಾಗಿತ್ತು.

ದೂರ ದೂರದಿಂದ ಈ ಕಾಳಗವನ್ನು ನೋಡಲೆಂದು ಆಹ್ವಾನಿತರಾಗಿದ್ದ ನಲವತ್ತೆಂಟು ಜನ ದೊರೆಗಳು, ಪಾಳೆಯಗಾರರು, ಹಲವಾರು ಜನ ಸರದಾರರು; ನಗರದ ಉತ್ಸಾಹಿ ಜನರೆಲ್ಲ ಕೋಟೆಯ ಗೋಡೆಗಳ ಮೇಲೆ, ಆ ಬಯಲು ಭೂಮಿಯ ಸನಿಹದ ಮನೆ ಮಹಲ್ಲುಗಳನ್ನು ಹತ್ತಿ ಕುಳಿತು ಆ ದೃಶ್ಯವನ್ನು ನೋಡಲು ಕುತೂಹಲಿಗಳಾಗಿದ್ದರು. ನಗರದ ದೊಡ್ಡ ಸಣ್ಣ ಬೀದಿಗಳ ಇಕ್ಕೆಲಗಳ ಮನೆಗಳ ಬಾಗಿಲುಗಳು ಭದ್ರವಾಗಿ ಮುಚ್ಚಿಕೊಂಡಿದ್ದವು.

ದೊರೆ ಆದಿಲಶಾಹಿ ಮತ್ತವನ ಪರಿವಾರದವರು, ದಿವಾನರು, ಸರದಾರರು ಮೊದಲಾದವರು ಅರಮನೆಯ ಮೇಲ್ಬಾವಣಿಯ ಮೇಲೆ ವಿರಾಮದಿಂದ ಕುಳಿತಿದ್ದರು. ಸುಲ್ತಾನನ ಮೊಗ ಮಂದಹಾಸದಿಂದ ಬೀಗುತ್ತಿತ್ತು. ಅವನ ಮದ್ದಾನೆ ಅದಾಗಲೇ ಹಲವಾರು ಜನರ ಸಾವಿಗೆ ಕಾರಣವಾಗಿತ್ತು. ಅಂಥ ನೂರಾರು ಜನ ಸೈನಿಕರ ಪ್ರಾಣ ತಗೆದುಕೊಂಡ ಮದ್ದಾನೆಯನ್ನು ಈ ಕಿರಾತಕ ಕೊಲ್ಲುವುದು ಅಸಾಧ್ಯವೇ ಎಂದವನಿಗೆ ಅನ್ನಿಸಿತ್ತು.

ಕ್ರೀಡೆ ಆರಂಭವಾಗುವ ಮುಂಚೆ ಘೋಷಣೆಯೊದನ್ನು ಹೊರಡಿಸಲಾಯಿತು.

ಉದ್ವೇಷಕ ಆನೆಯೊಂದರ ಮೇಲೆ ಕುಳಿತು ನಗಾರಿಯನ್ನು ಮೊಳಗಿಸಿ ಘೋಷಿಸಿದ:

“ಕೇಳಿರಿ ಕೇಳಿರಿ ಮಹಾಜನಗಳೇ; ಕೇಳಿರಿ. ಇದೊಂದು ವೀರರಿಗೆ ಮುಕ್ತಾಹ್ವಾನವಾಗಿದ್ದು; ಯಾರಾದರು ವೀರರು ನಮ್ಮ ಮದ್ದಾನೆಯನ್ನು ನಿಯಂತ್ರಿಸಿ ನಮ್ಮ ಸುಲ್ತಾನರಿಗೆ ಅದರ ಮೂಲಕ ಸಲಾಂ ಮಾಡಿಸಿದರೆ, ಅಂಥವರಿಗೆ ಒಂಭತ್ತು ಲಕ್ಷ ದಿನಾರಗಳನ್ನು ಮತ್ತು ಇತರ ಭೂಮಿ ಸೀಮೆಗಳನ್ನು ವೀರಶುಲ್ಕದ ರೂಪದಲ್ಲಿ ಕೊಡಲಾಗುವುದು.

ಇಲ್ಲಿ ನೆರೆದಿರುವ ನಿಮ್ಮಲ್ಲಿ ಯಾರಿಗಾದರೂ ತಮ್ಮ ಸಾಮರ್ಥ್ಯದ ಮೇಲೆ ಅಸೀಮ ವಿಶ್ವಾಸವಿದ್ದರೆ; ಅಂಥವರು ದೊರೆಗಳ ಸಮ್ಮಖದಲ್ಲಿ ಚಿನ್ನದ ಹರಿವಾಣದಲ್ಲಿ ಇರಿಸಿರುವ ವೀಳೆಯವನ್ನು ಎತ್ತುವ ಮೂಲಕ ತಮ್ಮ ಸಮ್ಮತಿಯನ್ನು ವ್ಯಕ್ತಪಡಿಸಲು ಸೂಚಿಸಲಾಗಿದೆ. ಕೇಳಿರಿ, ಕೇಳಿರಿ, ಮಹಾಜನಗಳೇ, ವೀರ ಮಹಾಪುರುಷರೇ, ಕೇಳಿರಿ ಕೇಳಿರಿ..”

ಘೋಷಣೆಗಳು ಹಲವಾರು ಬಾರಿ ಮೊಳಗಿಸುತ್ತ ಅವನು ನಗರದ ನಿರ್ಜನ ಬೀದಿ ಬೀದಿಗಳಲ್ಲಿ ಸುತ್ತಾಡಿದ. ಕೂಡು ದಾರಿಗಳ ಮಧ್ಯ ಆನೆಯನ್ನು ನಿಲ್ಲಿಸಿ ಅದರ ಮೇಲೆ ಕುಳಿತು ಮತ್ತದೇ ಬಗೆಯ ಘೋಷಣೆಯನ್ನು ಮೊಳಗಿಸುತ್ತಿದ್ದ. ನಗಾರಿ ಬಾರಿಸಿ ಜನರ ಗಮನವನ್ನು ತನ್ನೆಡೆಗೆ ಸೆಳೆದು ಮತ್ತೆ ಘೋಷಣೆಯನ್ನು ಹೊರಡಿಸುತ್ತಿದ್ದ. ಮತ್ತು ನಗರದಲ್ಲಿ ಕೂಡಿರುವ ಎಲ್ಲರ ಕಿವಿಗಳು ಆ ಘೋಷಣೆಯನ್ನು ಕೇಳಿಸುವಂತೆ ಅವನು ಉದ್ವೇಷಿಸುತ್ತಿದ್ದ.

ಪಿಡ್ಡನಾಯಕ ತನ್ನ ಸೈನಿಕರೊಂದಿಗೆ ಕೋಟೆಯ ಮೇಲೆ ವಿಶ್ರಮಿಸಿದ್ದ. ಯಾರಾದರೂ ವೀಳ್ಯವನ್ನು ಎತ್ತಲು ಬರುವರೆಂದು ಒಂದಿಷ್ಟು ಸಮಯ ಕಾದು ನೋಡಿದ. ಘಳಿಗೆಗಳ ಮೇಲೆ ಘಳಿಗೆಗಳು ಕಳೆದರೂ ಯಾರೊಬ್ಬರೂ ಆ ಮಹಾ ಹೋರಾಟಕ್ಕಾಗಿ ಮುಂದೆ ಬರಲಿಲ್ಲ. ಅವನು ಆ ದೊಡ್ಡ ಬಯಲಿನಲ್ಲಿ ಘೀಳಿಡುತ್ತ ಹುಚ್ಚಾಟದಲ್ಲಿ ತೊಡಗಿದ್ದ ಮದ್ದಾನೆಯತ್ತ ಒಂದು ನೋಟವನ್ನು ಬೀರಿದ.

ಅದು ಮನಬಂದಂತೆ ಶ್ವೇಚ್ಛೆಯಲ್ಲಿ ಆ ಬಯಲಿನಲ್ಲಿ ಪರಿಭ್ರಮಣ ಮಾಡುತ್ತ; ತನ್ನ ಕೋರೆದಾಡೆಗಳಿಂದ ನೆಲವನ್ನು ಕೆದರಿ ಧೂಳು ತೂರುತ್ತ ಸನಿಹದಲ್ಲಿ ಸವಾರರನ್ನು ಹೊತ್ತುಕೊಂಡು ನಿಂತಿರುವ ಕುದುರೆಗಳ ಮೇಲೆ ದಾಳಿ ಮಾಡಲು ಹವಣಿಸುತ್ತಿತ್ತು. ಆ ಕ್ಷಣವೇ ಕುದುರೆಗಳು ಸವಾರರ ಸೂಚನೆಯಂತೆ ದೂರ ಓಡಿಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುತ್ತಿದ್ದವು.

ಅಂತಿಮವಾಗಿ ಪಿಡ್ಡನಾಯಕ ಮೇಲೆದ್ದ. ಅವನಿಗಾಗಿಯೇ ಕಾದಿರಿಸಲಾಗಿದ್ದ ಕುದುರೆಯನ್ನು ಹತ್ತಿ ಸುಲ್ತಾನ ಆದಿಲಶಾಯಿಯೆಡೆಗೆ ಅದನ್ನು ಓಡಿಸಿ ಅರಮನೆಯ ಮುಂದೆ ನಿಂತು ಕುದುರೆಯಿಂದ ಇಳಿದು ಸರಸರನೆ ಆ ಅರಮನೆಯ ಗೋಡೆಯನ್ನು ಹತ್ತಿದ.

ಮತ್ತು ಮುಂದಿನ ಕೆಲವೇ ಕ್ಷಣಗಳಲ್ಲಿ ಸುಲ್ತಾನನ ಎದುರು ಹಾಜರಾಗಿ ಮುಜುರೆ ಮಾಡಿ ಗೌರವ ಸಲ್ಲಿಸಿ ಬೆಕ್ಕಸ ಬೆರಗಾಗಿ ತನ್ನನ್ನೇ ನೋಡುತ್ತಿದ್ದ ಅವನೆಡೆಗೆ ಮುಗುಳ್ಳಗೆಯೊಂದನ್ನು ತೂರಿ ಅವನೆದುರಿಗೆ ಇರಿಸಿದ ಚಿನ್ನದ ಹರಿವಾಣದೊಳಗಿನ ವೀಳ್ಯವನ್ನು ಎತ್ತಿಕೊಂಡು; ಗೋಡೆ ಏರಿದ ವೇಗದಲ್ಲಿಯೇ ಮತ್ತೆ ಅದೇ ಗೋಡೆಯ ಮೂಲಕವೇ ಸರಸರನೇ ಇಳಿದು ಕುದುರೆ ಹತ್ತಿ ಮದ್ದಾನೆ ಇರುವ ಮೈದಾನದಲ್ಲಿ ಕಾಣಿಸಿಕೊಂಡ. ಮೈದಾನದ ಮಧ್ಯ ಮದ್ದಾನೆ ಅದೇ ಮುಂಚಿನ ಹುಮ್ಮಸ್ಸಿನಿಂದಲೇ ಘೀಳಿಡುತ್ತ, ಕೋರೆಯಿಂದ ನೆಲವನ್ನು ಬಗೆದು ಧೂಳು ಮಾಡುತ್ತ; ಸನಿಹದಲ್ಲಿರುವ ನಾಲ್ಕಾರು ಕುದುರೆಗಳತ್ತ ಹರಿಯುತ್ತ ಆರ್ಭಟ ಮಾಡುತ್ತಿತ್ತು.

ಮದ್ದಾನೆಯ ಸಣ್ಣ ಕಣ್ಣುಗಳು ಕೆಂಡದುಂಡೆಯಾಗಿದ್ದವು. ಅದರ ತಲೆಯಿಂದ ಮದಜಲ ಹಣೆಯ ಮೇಲಿನಿಂತ ಧಾರೆಯಾಗಿ ಮೇರೆ ಹರಿದು ಬರುತ್ತಿತ್ತು. ಎಲ್ಲ ಕುದುರೆ ಸವಾರರ ಕೈಯಲ್ಲೂ ನೀಳವಾದ ಈಟಿಗಳಿದ್ದು; ಅವರು ಸನಿಹ ಬಂದ ಮದ್ದಾನೆಯನ್ನು ಅದರಿಂದ ತಿವಿಯುವ ಯತ್ನ ಮಾಡಿ ಅದನ್ನು ಮತ್ತಷ್ಟು ಕೆರಳಿಸುತ್ತಿದ್ದರು.

ಈ ಕುದುರೆಗಳ ಮೇಲೆಯೇ ಕುಳಿತು ಈಟಿಯಿಂದ ಮದ್ದಾನೆಯನ್ನು ತಿವಿದು ಕೆರಳಿಸುವುದು; ಅದು ಉದ್ರೇಕಗೊಂಡು ಹಲ್ಲೆ ಮಾಡಲು ಮುಂದೆ ಧಾವಿಸಿ ಬಂದಾಗ ಕುದುರೆಗಳನ್ನು ತೀವ್ರವಾಗಿ ಅಲ್ಲಿಂದ ಓಡಿಸಿಕೊಂಡು ಹೋಗುವುದು-ಈ ಚೋದಕ ಕ್ರಿಯೆ ಅದಾಗಲೇ ಬಹಳ ಹೊತ್ತಿನಿಂದ ನಡೆದಿತ್ತು.

ಈಗ ಕುದುರೆಯನ್ನೇರಿಕೊಂಡು ಪಿಡ್ಡನಾಯಕ ಬಂದಿದ್ದ ಹೊಸ ಹುರುಪಿನೊಂದಿಗೆ. ಬಂದವನೇ ಉಳಿಕೆಯ ಕುದುರೆ ಸವಾರರಿಗೆ ದೂರ ಸರಿಯುವಂತೆ ಸನ್ನೆ ಮಾಡಿದ. ಅವರು ಅಲ್ಲಿಂದ ದೂರ ನಿರ್ಗಮಿಸಿದರು.

ಪಿಡ್ಡನಾಯಕನ ಕೈಯಲ್ಲಿ ತಲೆದಪ್ಪ, ಕೋಲುಸಣ್ಣ ಇರುವ ಮೊಳ ಉದ್ದದ ಒನಕೆಯೊಂದಿತ್ತು. ಸೊಂಟದಲ್ಲಿ ಒಂದು ಕಿರುಗತ್ತಿ, ಮೈ ಮೇಲಿನ ಚರ್ಮದ ಪೋಷಾಕುಗಳು ಬಿಗುವಾಗಿದ್ದು ಸಮರಕ್ಕೆ ಯೋಗ್ಯವಾಗಿದ್ದವು.

ಅವನು ತನ್ನ ಕುದುರೆಯನ್ನ ಮದ್ದಾನೆಯ ಸನಿಹ ತಂದ. ಅದು ಒಮ್ಮೆಗೆ ಕುದುರೆಯ ಮೇಲೆ ದಾಳಿ ಮಾಡಲು ಧುಮುಕಿತು. ಪಿಡ್ಡನಾಯಕ ಎಳೆದ ಕಡಿವಾಣಕ್ಕೆ ಕುದುರೆ ಕೂಡಲೆ ಹೊರಳಿ ಅವನ ಆಜ್ಞೆಯಂತೆ ವೇಗವಾಗಿ ಓಡಿತು. ಮದ್ದಾನೆ ಅವನನ್ನು ಬೆನ್ನಟ್ಟಿತು.

ಅವನು ತನ್ನ ಕುದುರೆಯನ್ನು ಮೈದಾನದಲ್ಲಿ ವರ್ತುಲಾಕಾರದಲ್ಲಿ ನಾಲ್ಕು ಸುತ್ತು ಓಡಿಸಿದ. ಮದ್ದಾನೆ ಆ ಕುದುರೆಯನ್ನು ಬೆನ್ನಟ್ಟಿತು. ಅವನು ಇದ್ದಕ್ಕಿದ್ದಂತೆ ಕುದುರೆಯ ಲಗಾಮು ಹಿಡಿದೆಳೆದು ಅದನ್ನು ಹಿಂದೆ ತಿರುಗಿಸಿದ ಮತ್ತು ಮದ್ದಾನೆಯ ನೇರಕ್ಕೆ ಕೊಂಡೊಯ್ದು ಅದು ಸನಿಹ ಬರುತ್ತಲೇ ತನ್ನ ಕೈಯಲ್ಲರುವ ತುದಿ ದಪ್ಪವಿರುವ ಒನಕೆಯ ಭಾಗದಿಂದ ನೆರವಾಗಿ ಅದರ ಹಣೆಗೇ ಗುರಿಹಿಡಿದು ತನ್ನಲ್ಲಿರುವ ಎಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಹೊಡೆದ. ಮದ್ದಾನೆ ಇಂಥ ಹೊಡೆತವನ್ನು ನಿರೀಕ್ಷಿಸಿರಲಿಲ್ಲ.

ಇದ್ದಕ್ಕಿದ್ದಂತೆ ಬಿದ್ದ ಭೀಮ ಹೊಡೆತದಿಂದ ಅದು ತತ್ತರಿಸಿತು. ಅದರ ಕಣ್ಣುಗಳಿಗೆ ಕತ್ತಲು ಅಡರಿರಬಹುದು. ಅದು ಅವನ ಅನಿರೀಕ್ಷಿತ ಹೊಡೆತಕ್ಕೆ ಬೆಚ್ಚಿ ಬಿದ್ದು ಹಿಂದಕ್ಕೆ ತಿರುಗಿ ಕ್ಷಣ ದಿಕ್ಕು ತೋಚದೆ ನಿಂತು ಬಿಟ್ಟಿತು.

ಕುದುರೆ ಓಡಿಸಿಕೊಂಡು ಅದರ ಎದುರಿಗೇ ಬಂದ ಪಿಡ್ಡನಾಯಕ ಮತ್ತೊಂದು ಏಟನ್ನು ಅದರ ಹಣೆಗೇ ಗುರಿ ಮಾಡಿ ಹೊಡೆದ. ಆನಂತರ ಒಂದರ ನಂತರ ಒಂದರಂತೆ ಹಲವು ಹೊಡೆತಗಳನ್ನು ಕೊಟ್ಟ. ಮದ್ದಾನೆ ಅಕ್ಷರಶಃ ಭೀತಿಗೆ ಒಳಗಾಗಿತ್ತು. ಅದರ ತಲೆಯಲ್ಲಿ ಮಂಪರು ಅಡರಿತ್ತು. ಅದು ದಿಕ್ಕು ತೋಚದೆ ನಿಂತಿತ್ತು. ಅದರ ಮದ ಮರ್ಧನಗೊಂಡಿತ್ತು.

ಪಿಡ್ಡನಾಯಕ ಕೂಡಲೇ ಕುದುರೆಯಿಂದ ಜಿಗಿದು ಅದರ ಬಾಲದ ಸಹಾಯದಿಂದ ಅದರ ಬೆನ್ನನ್ನೇರಿ ಮತ್ತೆ ತಲೆಯ ಮೇಲೆ ನಾಲ್ಕಾರು ಬಾರಿ ಒನಕೆ ಮಹಾ ಹೊಡೆತ ಕೊಟ್ಟ. ಮತ್ತದು ಕಣ್ಣು ಕತ್ತಲೆಗೆ ಒಳಗಾಗಿ ದಿಶೆಗಾಣದೆ ನಿಂತು ಬಿಟ್ಟಿತು. ಮತ್ತು ಮೊಟ್ಟ ಮೊದಲ ಬಾರಿಗೆ ಸೋತ ಭಾವವನ್ನು ಅನುಭವಿಸಿತು. ಪಿಡ್ಡನಾಯಕ ಅದರ ಹಣೆಯ ಮೇಲೆ ತಲೆಯ ಮೇಲೆ ನಿರಂತರ ಪ್ರವಾಹಗಳನ್ನು ಮುಂದುವರೆಸಿದ.

ಮದ್ದಾನೆ ಅಂತಿಮವಾಗಿ ಸೋತೆ ಎನ್ನುವಂತೆ ಸೊಂಡಿಲನ್ನು ಮೇಲೆತ್ತಿ ಹಲವಾರು ಬಾರಿ ಘೀಳಿಟ್ಟು ಹಿಂಗಾಲುಗಳ ಆಸರೆಯ ಮೇಲೆ ನೆಲದ ಮೇಲೆ ಕುಳಿತಿತು.

ಅದೀಗ ಪೂರ್ಣ ಶಾಂತಸ್ಥಿತಿಯಲ್ಲಿತ್ತು. ಅದರ ಹುಚ್ಚು ಪಿಡ್ಡನಾಯಕನ ಹೊಡೆತಕ್ಕೆ ನುಚ್ಚು ನೂರಾಗಿರಬೇಕು. ಉಸಿರು ಬಿಗಿ ಹಿಡಿದು ಆನೆಯೊಂದಿಗೆ ಪಿಡ್ಡನಾಯಕನ ಕಾಳಗ ನೋಡುತ್ತಿದ್ದ ಜನ ‘ಮುಂದೇನಾಗುವುದೋ?’ ಎಂಬ ಆತಂಕದಲ್ಲಿ ಇದ್ದರು. ಕೊನೆಗೆ ಮದ್ದಾನೆ ಪರಾಜಯಗೊಂಡಿದ್ದನ್ನು ಕಂಡು ಅವರೂ ನಿಟ್ಟುಸಿರು ಬಿಟ್ಟರು.

ಮದ್ದಾನೆ ಪಿಡ್ಡನಾಯಕನನ್ನು ತನ್ನ ಒಡೆಯನೆಂದು ಆದರಿಸಿತೇನೋ.!! ಅವನು ಬೆನ್ನು ಚಪ್ಪರಿಸಿದ. ತಲೆಯ ಮೇಲೆ ಸಾಂತ್ವನದ ಹಸ್ತ ಆಡಿಸಿ ಪ್ರೀತಿಯನ್ನು ವ್ಯಕ್ತಪಡಿಸಿದ. ಆನೆ ಮತ್ತೆ ಎದ್ದು ನಿಂತಿತು. ಅವನು ಅದನ್ನು ಹತ್ತಿ ಅರಮನೆಯತ್ತ ಹೊರಟ.

ಅದೀಗ ಸಹಜ ನಡೆಯ ಶಾಂತ ಆನೆಯಂತೆ ಮದ್ ಗಾಂಭೀರದ ಹೆಜ್ಜೆಗಳನ್ನಿಡುತ್ತ ಅವನನ್ನು ಹೊತ್ತು ಅರಮನೆಯತ್ತ ಹೊರಟಿತು. ಪಿಡ್ಡನಾಯಕನ ಸೈನಿಕರು ವಿಜಯ ಘೋಷ ಮೊಳಗಿಸಿದರು. ಗುಣಕ್ಕೆ ಮತ್ಸರವೇಕೆ ಎನ್ನುವಂತೆ ಇತರರೂ ಅವನ ಪರ ಜಯಘೋಷ ಮಾಡಿದರು.

ಆನೆ ಅರಮನೆಯತ್ತ ಹೊರಟು ಬರುತ್ತಿರುವುದನ್ನು ಬಾದಶಹಾ ಆದಿಲಶಾಹಿ ಅರಮನೆಯ ಉಪ್ಪರಿಗೆಯಿಂದಲೇ ನೋಡಿದ. ಮತ್ತು ಕೆಳಗೆ ಇಳಿದುಬಂದಿದ್ದ. ಅವನಲ್ಲಿ ಪಿಡ್ಡನಾಯಕನ ವೀರತ್ವದ ಕುರಿತು ಅಭಿಮಾನ ಮೂಡಿತು. ಮೇಲಿನಿಂದ ಕೆಳಗೆ ಇಳಿದು ಬಂದ ಸುಲ್ತಾನನಿಗೆ ಆನೆ ತನ್ನ ಸೊಂಡಿಲನ್ನೆತ್ತಿ ಸಲಾಂ ಮಾಡಿತು.

ಸುಲ್ತಾನ ಆದಿಲಶಾಹಿ ಪಿಡ್ಡನಾಯಕನ ಶೌರ ಸಾಮರ್ಥ್ಯಗಳನ್ನು ಹೊಗಳಿ ಸನ್ನದನ್ನು ಬರೆಯಿಸಿ ಅನೇಕ ಬಿರುದಾವಳಿ ಲಿಖಿಸಿದ ಎರಡೂವರೆ ಮಣ ತೂಕದ ಉಕ್ಕಿನ ಗದೆಯನ್ನು ಅವನಿಗೆ ಕಾಣಿಕೆಯನ್ನಾಗಿ ಇತ್ತ.

ಗಜಗಂಡ ಗಂಡಭೇರುಂಡ ಗಡ್ಡಿಪಿಡ್ಡನಾಯಕ ಬಹರಿ ಬಹದ್ದೂರ ಮತ್ತು ಪಿಡ್ಡನಾಯಕ ಮಾಮಲೆನಸರತಾಬಾದ ಎಂಬ ಬಿರುದಾವಳಿಗಳನ್ನು, ಅಧಿಕಾರಗಳನ್ನು; ಜೊತೆಗೆ ಒಂಭತ್ತು ಲಕ್ಷ ದಿನಾರಗಳನ್ನು ಮತ್ತು ಆಂದೋಲ, ನೆಲೋಗಿ, ಶಿರವಾಳ, ರಸ್ತಾಪುರ, ವಡಗೇರಾ, ಮಳ್ಳಿ, ಕೆಂಭಾವಿ, ಹುಣಸಗಿ, ಕೊಡೆಕಲ್, ಮದ್ರಿಕಿ ಸೇರಿದಂತೆ ಹತ್ತು ತಾಲ್ಲೂಕುಗಳನ್ನು ಅವನಿಗೆ ಉಂಬಳಿ ಹಾಕಿಕೊಟ್ಟ.

ಗಡ್ಡಿಪಿಡ್ಡನಾಯಕ ಇದಕ್ಕೆ ಬದಲಿಯಾಗಿ ತಾವೂ ನನ್ನಿಂದ ಏನಾದರೂ ಪಡೆಯಬೇಕೆಂದು ಆದಿಲಶಾಹಿಯಲ್ಲಿ ಕೋರಿದ. ಅವನು ಹೇಳಿದ :

“ನಿನ್ನಂಥ ವೀರನಿಂದ ನನ್ನಂಥ ಸಾಮ್ರಾಟರು ಏನು ತಾನೆ ಬೇಡಿಯಾರು. ಬೇಡುವುದಾದರೇ ನಿನ್ನ ವೀರತನವನ್ನೇ ಬೇಡಬೇಕು. ಈ ಆನೆಯಂತೆ ಮದವೇರಿದ ವ್ಯಕ್ತಿಯೊಬ್ಬ ನಮ್ಮದೊಂದು ಕೋಟೆಯೊಳಗೆ ಆಕ್ರಮಿಸಿ ಕುಳಿತು ‘ನನ್ನನ್ನು ಗೆದ್ದು ಈ ಕೋಟೆಯನ್ನು ನಿಮ್ಮ ವಶಕ್ಕೆ ಪಡೆಯಿರಿ’ ಅನ್ನುತ್ತಿದ್ದಾನೆ. ಅವನ ಗಡ್ಡ ತುಸು ದೊಡ್ಡದಾಗಿ ಬೆಳೆದಿದೆ. ನೀನವನನ್ನು ಸೋಲಿಸಿ ಗರ್ವ ಹರಣ ಮಾಡಿದರೆ ಅದೇ ನೀನಮಗೆ ಕೊಡುವ ಬಳುವಳಿ. ಸ್ನೇಹತ್ವದ ಕುರುಹು.”

ಪಿಡ್ಡನಾಯಕ ಕೇಳಿದ :

“ಹಾಗಿದ್ದರೆ ಹೇಳಿ ಅವನಾರು ಎಂದು..!! ಈ ಗಡ್ಡಿಪಿಡ್ಡನಾಯಕನ ಶೌರವನ್ನು ಈ ಆನೆಯಂತೆ ಅವನೂ ಒಮ್ಮೆ ನೋಡಲಿ. ಈ ಆನೆಗೆ ಮತ್ತೇರಿತು.

ನನ್ನಿಂದ ಮಹಾ ಹೊಡೆತ ತಿಂದು ಮದ ಇಳಿಸಿಕೊಂಡೂ ಉಳಿಯಿತು. ಆ ಮದವೇರಿದ ಆನೆ ಹೊಡೆತ ತಿಂದು ಮದವನ್ನು ಇಳಿಸಿಕೊಳ್ಳುವುದರ ಜೊತೆಗೆ ಪ್ರಾಣವನ್ನೂ ಕಳೆದುಕೊಳ್ಳ ಬೇಕಾಗುತ್ತದೆ. ದಯವಿಟ್ಟು ಅವನ ಕುರಿತು ನನಗೆ ತಿಳಿಸುವ ಕೃಪೆ ಮಾಡಿ. ಅವನನ್ನು ಗೆದ್ದು ಈ ಪಿಡ್ಡನಾಯಕ ಮಹಾ ಪ್ರಾಣಿಯಾದ ಆನೆಯನ್ನೇ ಅಲ್ಲ; ಕುತಂತ್ರಿ ನರಗಜವನ್ನೂ ನಾಶ ಮಾಡಬಲ್ಲನು ಎಂಬುದನ್ನು ಸಾಬೀತು ಮಾಡುತ್ತೇನೆ” ಎಂದನು.

ಗಡ್ಡಿಪಿಡ್ಡನಾಯಕನಿಗೆ ಅವನ ಕುರಿತು ವಿವರಗಳನ್ನು ಹೇಳಲಾಯಿತು.

ಪಿಡ್ಡನಾಯಕ ಕೂಡಲೇ ಕ್ರಿಯಾಶೀಲನಾದ. ಮತ್ತು ತನ್ನ ವೀರ ಬೇಡಪಡೆಯೊಂದಿಗೆ ಜಾವಳಿ ಕಿಲ್ಲೆಯ ಮೇಲೆ ದಾಳಿ ಮಾಡಿದ. ಹನ್ನೆರಡು ವರ್ಷಗಳಿಂದ ಅದೇ ಕೋಟೆಯಲ್ಲಿ ಬೀಡು ಬಿಟ್ಟು ಬಾದಶಹ ಆದಿಲಶಹಾನಿಗೆ ಕಿರುಕುಳ ಕೊಡುತ್ತಿದ್ದ ಅಬ್ದುಲ್ಲಾಖಾನ ಎಂಬುವವನ ಮೇಲೆ ಸಮರ ಸಾರಿ ಅವನನ್ನು ಸೋಲಿಸಿ ಅವನ ಸೊಕ್ಕು ಅಡಗಿಸಿ ವಿಜಯಪುರ ದೊರೆಯ ಕೃಪೆಗೆ ಒಳಗಾದನು.

ಪಿಡ್ಡನಾಯಕನಿಂದ ಗಜ ಮರ್ಧನ ಮಾಡಿಸಿದ ನಂತರ ಸುಲ್ತಾನ ಆದಿಲಶಾಹಿಗೆ ಆನೆಕ್ರೀಡೆಯ ಹುಚ್ಚು ಹತ್ತಿತು. ಅದನ್ನು ಪ್ರತಿವರ್ಷ ನಡೆಸಬೇಕು ಎಂಬ ಇರಾದೆಯನ್ನು ಅವನು ಹೊಂದಿದ. ಮಾರನೆಯ ವರ್ಷ ಅದನ್ನು ನಡೆಸುವ ಉದ್ದೇಶ ಹೊಂದಿ ಅದರ ವ್ಯವಸ್ಥೆಯಲ್ಲಿ ತೊಡಗಿದ. ಕೂಡಲೇ ದೆಹಲಿಯಿಂದ ಒಂದು ಎಚ್ಚರಿಕೆಯ ಪತ್ರ ಬಂದಿತು.

ಮೊಗಲ ದೊರೆ ಶಹಾಜಹಾನ ಅದನ್ನು ಕಡುವಾಗಿ ವಿರೋಧಿಸಿ ‘ಅದು ಚಕ್ರವರ್ತಿಗಳು ಮಾತ್ರ ನಡೆಸುವ ಕ್ರೀಡೆಯಾಗಿದ್ದು, ನಿಮ್ಮಂಥ ಸಾಮಂತ ದೊರೆಗಳು ಆಡಿಸುವುದು ತರವಲ್ಲ. ಇನ್ನು ಮುಂದೆ ಆ ಕ್ರೀಡೆ ನಿಮ್ಮಲ್ಲಿ ನಡೆಸುವಂತಿಲ್ಲ, ಹಾಗೇನಾದರೂ ನಮ್ಮ ಆಜ್ಞೆಯನ್ನು ಮೀರಿ ನಡೆಸಿದ್ದೇ ಆದರೆ ನಿಮ್ಮ ಮೇಲೆ ಯುದ್ಧ ಸಾರಿ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ’ ಎಂದು ಹೆದರಿಸಿದ.

ಗಡ್ಡಿಪಿಡ್ಡನಾಯಕ ವಾಗಣಗೇರಿಯಲ್ಲಿ ರಾಜ್ಯವಾಳುವಾಗ ವಿಜಯಪುರದ ಅರಸ ಮಹಮ್ಮದ ಆದಿಲಶಹಾ ದೀರ್ಘ ಅನಾರೋಗ್ಯ ಪೀಡಿತನಾಗಿ ಮರಣ ಹೊಂದಿದ.

ಮೃತದೊರೆಯ ಮರಣಪೂರ್ವ ಇಚ್ಛೆಯಂತೆ ಇಮ್ಮಡಿ ಅಲಿ ಆದಿಲಶಹಾ ವಿಜಯಪುರದ ಹೊಸ ಬಾದಶಹಾನಾದನು. ಇವನು ತೀರ ಚಿಕ್ಕವಯಸ್ಸಿನವನಾಗಿದ್ದು; ಸಿಂಹಾಸನಾರೋಹಣ ಮಾಡುವಾಗ ಇವನ ವಯಸ್ಸು ನಾಲ್ಕು ವರ್ಷವಾಗಿತ್ತು. ಚಿಕ್ಕ ಬಾಲಕ ಸಿಂಹಾಸನದ ಮೇಲೆ ಕೂಡುತ್ತಲೇ ವಿಜಯಪುರಕ್ಕೆ ಸೇರಿದ ಹಲವು ಜನ ಸಾಮಂತರು ಸಂಬಂಧ ಕಡಿದುಕೊಳ್ಳಲು ಮುಂದಾದರು.

‘ಅಲಿ ಆದಿಲಶಹ ಹಿಂದಿನ ದೊರೆಯ ರಕ್ತದಿಂದ ಜನಿಸಿದವನೇ ಅಲ್ಲ, ಅವನು ಅನಾಥನಾಗಿದ್ದು, ದೊರೆಯ ಜನಾನ ಖಾನೆಯಲ್ಲಿ ಬೆಳೆದವನಾಗಿದ್ದಾನೆ. ಅವನನ್ನು ರಾಜ್ಯದ ಗದ್ದುಗೆಯ ಮೇಲೆ ಕೂಡಿಸುವ ಮುಂಚೆ ಚಕ್ರವರ್ತಿಯಾದ ದಿಲ್ಲಿಯ ಮೊಗಲ ಬಾದಶಹಾನಿಂದ ಅನುಮತಿಯನ್ನು ಪಡೆಯಬೇಕಿತ್ತು.

ಆದರೆ ಹಾಗೆ ಮಾಡದೇ ಪ್ರಭುತ್ವವನ್ನು ಅವಮಾನಿಸಲಾಗಿದೆ’ ಎಂದು ಶಹಾಜಹಾನನ ಪುತ್ರ ಔರಂಗಜೇಬನು ತಗಾದೆ ತಗೆದು ತಂದೆಯ ಅಪ್ಪಣೆ ಪಡೆದು ವಿಜಯಪುರ ರಾಜ್ಯದ ಮೇಲೆ ದಾಳಿ ಮಾಡಲು ಬಯಸಿದನು. ಹಾಗೆಯೇ ವಿಜಯಪುರದ ಆಧೀನದಲ್ಲಿರುವ ಸಾಮಂತರಿಗೆ ವಿವಿಧ ಬಗೆಯ ಆಮಿಷಗಳನ್ನು ಒಡ್ಡಿ ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನವನ್ನು ಆರಂಭಿಸಿದನು.

ಆ ಸಂದರ್ಭದಲ್ಲಿ ಅವನ ಕಣ್ಣಿಗೆ ಎದ್ದು ಕಂಡ ದೊರೆ ಎಂದರೆ ವಾಗಣಗೇರಿಯ ಪಿಡ್ಡನಾಯಕ. ಉಳಿದವರೊಡನೆ ಅವನ ಮಾತುಕತೆಗಳು ಯಶಸ್ವಿಯಾಗಲು ಆರಂಭಿಸಿದವು. ಕೆಲವರು ಆಹ್ವಾನವಿಲ್ಲದೆ ತಾವಾಗಿಯೇ ಔರಂಗಜೇಬನ ಪಕ್ಷ ಸೇರಲಾರಂಭಿಸಿದರು.

ಆದರೆ ಪಿಡ್ಡನಾಯಕ ಅವನ ಆಮಿಷಗಳಿಗೆ ಬಲಿಯಾಗದೆ ವಿಜಯಪುರದ ನೂತನ ದೊರೆಯ ಮೇಲೆ ನಿಷ್ಠೆಯನ್ನು ವ್ಯಕ್ತಪಡಿಸಿದನು. ಹೀಗಾಗಿ ಔರಂಗಜೇಬ ವಾಗಣಗೇರಿಯ ದೊರೆ ಪಿಡ್ಡನಾಯಕನ ಮೇಲೆ ಮುಳಿದು ಸೂಕ್ತ ಪಾಠ ಕಲಿಸಲು ಸಮಯಕ್ಕಾಗಿ ಕಾದನು.

ಔರಂಗಜೇಬ ಗೋವಳಕೊಂಡ ರಾಜ್ಯದ ದೊರೆಯಿಂದ ರಾಜದ್ರೋಹಿ ಎಂದು ಕರೆಯಿಸಿಕೊಂಡು ಹೊರದೂಡಲ್ಪಟ್ಟ ಮೀರಜುಮ್ಲಾನನ್ನು ತನ್ನೆಡೆ ಸೆಳೆದುಕೊಂಡನು.

ಮತ್ತು ತನ್ನ ದೊಡ್ಡದೊಂದು ಸೈನ್ಯದೊಡನೆ ದೌಲತಾಬಾದನಿಂದ ಹೊರಟು ಬೀದರ ಕೋಟೆಯ ಮೇಲೆ ದಾಳಿ ಮಾಡಿ ಇಪ್ಪತ್ತೇಳು ದಿನಗಳ ಕಾಲದ ಹೋರಾಟದ ನಂತರ ಅಂತಿಮವಾಗಿ ಅದನ್ನು ಗೆದ್ದುಕೊಂಡನು. ವಿಜಯಪುರದ ಮುಖ್ಯ ವಜೀರನಾದ ಖಾನ ಅಹಮ್ಮದನು ಔರಂಗಜೇಬನ ರಣೋತ್ಸಾಹಕ್ಕೆ ಮಂಕು ಬರಿಸಲು ಸೈನ್ಯದೊಂದಿಗೆ ಬೀದರನತ್ತ ಹೊರಟನು.

ಆ ಸಂಗತಿಯನ್ನು ಅರಿತು ಕೆಂಡಮಂಡಲನಾದ ಔರಂಗಜೇಬ್ ವಿಜಯಪುರವನ್ನು ಸರ್ವನಾಶ ಮಾಡಲೆಂದು ತನ್ನ ಸರದಾರ ಮಹಬತಖಾನನನ್ನು ಸೈನ್ಯದೊಂದಿಗೆ ಅದರತ್ತ ಕಳುಹಿಸಿದನು. ಅವನು ಕಲ್ಯಾಣದಿಂದ ಕಲಬುರ್ಗಿಗೆ ಬರುವ ಮಾರ್ಗ ಮಧ್ಯದಲ್ಲಿಯೇ ವಿಜಯಪುರದ ಆದಿಲಶಾಹಿ ಮತ್ತು ಮೊಗಲರ ಸೈನ್ಯಗಳು ಸಂಧಿಸಿ ಸಮರದಲ್ಲಿ ತೊಡಗಿಕೊಂಡವು.

ವಿಜಯಪುರದ ಸರದಾರ ಮತ್ತು ವಜೀರನಾಗಿದ್ದ ಖಾನ ಅಹಮ್ಮದ ಮತ್ತು ಸರದಾರ ಅಫಜಲಖಾನರಿಬ್ಬರೂ ಅದೆಷ್ಟೇ ಮುತುವರ್ಜಿಯಿಂದ ಹೋರಾಟ ಮಾಡಿದರೂ; ಮೊಗಲ ಸುಲ್ತಾನ ಔರಂಗಜೇಬನ ಸರದಾರ ಮಹಬತಖಾನನಿಂದ ಸೋಲನ್ನುಂಡರು. ಮಹಬತಖಾನ ಅಲ್ಲಿಂದ ಭಾಲ್ಕಿಯತ್ತ ಪಯಣಿಸಿದನು.

ಆ ಇನ್ನೊಂದೆಡೆ ಔರಂಗಜೇಬ ಸೈನ್ಯದೊಂದಿಗೆ ಕಲ್ಯಾಣದ ಮೇಲೆ ಮುತ್ತಿಗೆ ಹಾಕಿದನು. ಅಲ್ಲಿನ ದೊರೆಯ ಸಹಾಯಕ್ಕೆ ವಿಜಯಪುರದ ಸೈನಿಕರು ಒದಗಿದರು.

ಕಲ್ಯಾಣದ ಕಿಲ್ಲೆಯೊಳಗಿನ ಜನರು ಅವರ ಸಹಾಯಕ್ಕೆ ಬಂದರು. ಔರಂಗಜೇಬನ ಮೇಲೆ ಸೇಡು ತೀರಿಸಿಕೊಳ್ಳಲು ಉದ್ಯುಕ್ತರಾದ ವಿಜಯಪುರದ ಸರದಾರರು ಮೊಗಲರ ಮೇಲೆ ತೋಪುಗಳ ಮೂಲಕ ಬೆಂಕಿಯ ಮಳೆಗರೆಯಲು ಆರಂಭಿಸಿದರು. ಮತ್ತು ಔರಂಗಜೇಬನ ಸೈನ್ಯಕ್ಕೆ ಹಿಡಿ ಕೂಳೂ ಸಿಗದಂತೆ ವ್ಯವಸ್ಥೆ ಮಾಡಿ ಅವರನ್ನು ಕಂಗಾಲಾಗಿಸಿದರು. ಕಲ್ಯಾಣದ ಸಮೀಪ ಹತ್ತು ಮೈಲು ಅಂತರದಲ್ಲಿ ಮಹಬತಖಾನನ ಜೊತೆ ವಿಜಯಪುರದ ವೀರ ಸೈನ್ಯ ಘನಘೋರವಾಗಿ ಸೆಣೆಸಿತು.

ಮಹಬತಖಾನನನೊಂದಿಗಿದ್ದ ರಜಪೂತ ಸರದಾರರ ವೀರತನದ ಕಾರಣದಿಂದ ಮೊಗಲರಿಗೆ ಜಯವಾಯಿತು. ವಿಜಯಪುರದವರು ಅಲ್ಲಿಂದ ಕಾಲ್ಮೀಳಬೇಕಾಯಿತು. ಅತ್ತ ಕಲ್ಯಾಣದ ಕಿಲ್ಲೇದಾರನಾದರೂ ಪರಾಕ್ರಮದಿಂದ ಕಾದಾಡಲು ಆರಂಭಿಸಿದ್ದ.

ವಿಜಯಪುರದ ಸೈನ್ಯ ಅಫಜಲಖಾನ ಮತ್ತು ಖಾನಮಹಮ್ಮದನೊಂದಿಗೆ ಗಡ್ಡಿಪಿಡ್ಡನಾಯಕನ ಬೇಡರ ಪಡೆಯೂ ಬರಲಿದೆ ಎಂಬ ಗುಪ್ತ ವಾರ್ತೆಯನ್ನರಿತ ಔರಂಗಜೇಬ ಆ ಸಂಯುಕ್ತ ಪಡೆಯು ಕಲ್ಯಾಣದವರ ನೆರವಿಗೆ ಬರಬಾರದೆಂದು ತನ್ನ ಸರದಾರರ ನೇತೃತ್ವದಲ್ಲಿ ಸೈನ್ಯದ ತುಕಡಿಯೊಂದನ್ನು ಕಲಬುರಗಿಯತ್ತ ಅಟ್ಟಿದ.

ಅವರು ಯಾವ ಅವಸರವೂ ಇಲ್ಲದಂತೆ ನಿಧಾನವಾಗಿ ಚಲಿಸುತ್ತ ಮಾರ್ಗ ಮಧ್ಯದ ಸಿಕ್ಕ ಹಳ್ಳಿ ಪಟ್ಟಣಗಳನ್ನು ಲೂಟಿ ಮಾಡುತ್ತ ಮುನ್ನಡೆದರು. ಕೂಡಲೇ ಯುದ್ಧ ನಿಲ್ಲಿಸಬೇಕು ಎನ್ನುವಂಥ ಆಜ್ಞೆ ದಿಲ್ಲಿಯಿಂದ ಬಂದಿತು. ತೀವ್ರ ಅನಾರೋಗ್ಯಕ್ಕೆ ಒಳಗಾದ ಶಹಾಜಹಾನ ದಕ್ಷಿಣದ ಸುಬೇದಾರನಾದ ತನ್ನ ಮಗ ಔರಂಗಜೇಬನಿಗೆ ತುರ್ತು ಸಂದೇಶ ಕಳುಹಿಸಿದ್ದ. ಔರಂಗಜೇಬ ದಿಗಿಲುಗೊಂಡ.

ನಾನಿಲ್ಲಿ ಪರ ವೈರಿಗಳೊಡನೆ ಹೋರಾಡುತ್ತ ಕುಳಿತರೆ ಅಲ್ಲಿ ನನ್ನ ಸಹೋದರರು ಎಲ್ಲಿ ಮೊಗಲ ಸಾಮ್ರಾಜ್ಯವನ್ನು ತಮ್ಮ ಉಡಿಗೆ ಹಾಕಿಕೊಳ್ಳುವರೇನೋ ಎಂಬ ಭೀತಿ ಅವನನ್ನು ಕಾಡಿತು. ಅವನು ದೆಹಲಿಯತ್ತ ಓಡಿದ. ದಕ್ಷಿಣ ದಿಶೆಯಲ್ಲಿ ಔರಂಗಜೇಬನ ನಿರ್ಗಮನದ ಕಾರಣದಿಂದ ತಾತ್ಕಾಲಿಕ ಶಾಂತಿ ನೆಲೆಸಿತು. ಹಲವರು ನಿಟ್ಟುಸಿರು ಬಿಟ್ಟರು.

ಔರಂಗಜೇಬ ಮಹಾಮಾರಿ ಇದ್ದಹಾಗೆ. ಅವನು ಅಧಿಕಾರ ಪಡೆಯುವುದಕ್ಕಾಗಿ, ರಾಜ್ಯ ವಿಸ್ತರಣೆಗಾಗಿ ಯಾರ ಮೇಲಾದರೂ ಯುದ್ಧ ಮಾಡಬಲ್ಲವನಾಗಿದ್ದ. ರಾಜ್ಯಾಧಿಕಾರದ ಮುಂದೆ ಅವನಿಗೆ ಎಲ್ಲ ಸಂಬಂಧಗಳೂ ಗೌಣವಾಗಿದ್ದವು.

ಸಿಂಹಾಸನವನ್ನು ದಕ್ಕಿಸಿಕೊಳ್ಳುವುದಕ್ಕಾಗಿ ಅವನು ಯಾರನ್ನಾದರೂ ದಂಡಿಸಬಲ್ಲವನಾಗಿದ್ದ; ಯಾರ ಪ್ರಾಣಗಳನ್ನಾದರೂ ಪಡೆಯಲು ಹಿಂದೆ ಮುಂದೆ ನೋಡದವನಾಗಿದ್ದ. ಅವನ ದಕ್ಷಿಣದ ದಂಡಯಾತ್ರೆ ಎಂದರೆ ಅದೊಂದು ಮಾರಿ ಮಸಣಿಯರ ಮಹಾಯಾತ್ರೆಯೇ ಆಗಿತ್ತು. ಅವನ ನಿರ್ಗಮನದಿಂದ ದಕ್ಷಿಣದ ಅರಸರು ತಾತ್ಕಾಲಿಕವಾದರೂ ಸರಿಯೇ ನಿಟ್ಟುಸಿರು ಬಿಟ್ಟರು.

ಕಲ್ಯಾಣ, ಬೀದರಕೋಟೆಗಳ ಮೇಲೆ ಯುದ್ಧ ನಡೆದಾಗ ಮತ್ತು ವಿಜಯಪುರದ ಮೇಲೂ ಔರಂಗಜೇಬ ದಾಳಿ ನಡೆಸಿದ ಸಂದರ್ಭದಲ್ಲಿ ಅವನು ವಾಗಣಗೇರಿ ದೊರೆ ಗಡ್ಡಿಪಿಡ್ಡನಾಯಕನ ಸಮರ ಸಾಮರ್ಥ್ಯವನ್ನು ಅಲ್ಲಿನ ಸರದಾರರು ಮತ್ತು ಯುದ್ಧ ವಿಶಾರದರಿಂದ ಕೇಳಿ ತಿಳಿದುಕೊಂಡಿದ್ದ.

ಮತ್ತು ಅವನನ್ನು ತನ್ನೆಡೆಗೆ ಸೆಳೆಯಲು ಬಹಳ ಯತ್ನ ಮಾಡಿದ. ಉತ್ತರದ ರಜಪೂತರಂತೆ ಈ ಭಾಗದಲ್ಲಿ ಸೈನಿಕರು ಎಂದರೆ ಪಿಡ್ಡನಾಯಕನ ಬೇಡ ಪಡೆಯೇ ಆಗಿದೆ ಎಂಬುದು ಅವನಿಗೆ ಮನದಟ್ಟಾಗಿತ್ತು.

ಹೀಗಾಗಿ ಬೇಡರ ಪಡೆಯ ನಾಯಕನನ್ನು ಬಲೆಗೆ ಬೀಳಿಸಿಕೊಂಡರೆ ಈ ಭಾಗದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವುದು ಸುಲಭವಾಗುತ್ತದೆ ಎಂಬುದು ಅವನ ತರ್ಕವಾಗಿತ್ತು. ಸ್ವತಃ ಔರಂಗಜೇಬನೇ ಪಿಡ್ಡನಾಯಕನಿಗೊಂದು ಪತ್ರವನ್ನೂ ಬರೆಯಿಸಿ: ತಾನು ಸಾರ್ವಭೌಮ ಎಂಬುವುದನ್ನೂ ಮರೆತು ತನಗಿಂತ ಬಹಳ ಅಲ್ಪ ರಾಜ್ಯವಾದ ವಾಗಣಗೇರಿಯ ಪಿಡ್ಡನಾಯಕನಿಗೆ ತಮ್ಮನ್ನು ಬೆಂಬಲಿಸುವಂತೆ ಮನವಿಯನ್ನು ಮಾಡಿಕೊಂಡಿದ್ದ.

ಆ ಪತ್ರದ ಮೇಲೆ ತೇಯ್ದ ಗಂಧದಲ್ಲಿ ಅದ್ದಿದ ತನ್ನ ಹಸ್ತಮುದ್ರೆಯನ್ನು ಒತ್ತಿ ಅವನೆಡೆಗೆ ಕಳುಹಿಸಿದ್ದ. ಆದರೆ ಗಡ್ಡಿ ಪಿಡ್ಡನಾಯಕ ಮಾತ್ರ ತನ್ನ ನಿಷ್ಠೆಯನ್ನು ಬದಲಿಸದೇ; ವಿಜಯಪುರದ ದೊರೆಯೊಂದಿಗೆ ಮುನ್ನಿನ ವಿಶ್ವಾಸದೊಂದಿಗೇ ಉಳಿದುಕೊಂಡ.

ಅವನಷ್ಟೇ ಅಲ್ಲ ಅವನ ನಂತರ ಮುಂದೆ ವಾಗಣಗೇರಿಯ ದೊರೆಗಳಾಗಿ ಬಂದ ಎಲ್ಲರೂ ವಿಜಯಪುರದೊಂದಿಗೆ ವಿಶ್ವಾಸದೊಂದಿಗೆಯೇ ಇದ್ದರು. ಔರಂಗಜೇಬನಂಥ ಮೊಗಲರ ದಕ್ಷಿಣದ ಸುಬೇದಾರನಿಂದ ಗಡ್ಡಿಪಿಡ್ಡನಾಯಕ ನೆರವಿನ ಮೊರೆಯ ಪತ್ರ ಬರೆಯಿಸಿಕೊಳ್ಳಬೇಕು ಎಂದಾದರೆ ಅವನ ಸಾಮರ್ಥ್ಯ ಅಂದು ಎಷ್ಟಿತ್ತು ಎನ್ನುವುದು ಅರಿವಿಗೆ ಬರದೇ ಇರದು.

ಪಿಡ್ಡನಾಯಕ ವಾಗಣಗೇರೆಯಲ್ಲಿರುವಾಗ ಪಿತ್ರಾರ್ಜಿತ ಆಸ್ತಿಯ ಸಲುವಾಗಿ ಅಣ್ಣ ತಮ್ಮಂದಿಯರ ಮಧ್ಯ ಕಲಹ ಆರಂಭವಾಗಿತ್ತು. ಪಿಡ್ಡನಾಯಕನು ಕಕ್ಕೇರಿಯನ್ನು ಬಿಟ್ಟು ಅಣ್ಣ ಲಿಂಗನಾಯಕನಿಂದ ಬೇರೆಯಾದಂದಿನಿಂದ ಪಿತ್ರಾರ್ಜಿತ ಎಲ್ಲ ಆಸ್ತಿಯನ್ನು ಅವನೇ ಅನುಭೋಗಿಸುತ್ತಿದ್ದನು.

ಕಕ್ಕೇರಿಯಿಂದ ಹೊರಬಂದ ನಂತರ ಏಳು ವರ್ಷಗಳವರೆಗೆ ಈ ವೈಮನಸ್ಸು ಹಾಗೆಯೇ ಮುಂದುವರೆದಿತ್ತು. ಅವರ ಮಧ್ಯ ಆಗಾಗ ಕಾಳಗವೂ ನಡೆಯುತ್ತಿತ್ತು. ಆದರೆ ಗಡ್ಡಿಪಿಡ್ಡನಾಯಕನಿಗೆ ಹಲವಾರು ಜನ ಹೆಂಡಂದಿಯರಿದ್ದರೂ ಒಬ್ಬರ ಉದರದಿಂದಲೂ ಒಂದು ಮಗುವೂ ಜನಿಸಲಿಲ್ಲ.

ಹೀಗಾಗಿ ಅಣ್ಣನೊಂದಿಗೆ ಜಗಳವಾಡುವುದರಲ್ಲಿ ಅರ್ಥವಿಲ್ಲವೆಂದು ಅವನೂ ಭಾವಿಸಿದ. ಅದೇ ಹೊತ್ತಿಗೆ ಅವರೀರ್ವರ ಸಹೋದರಿಯರಾದ ಕರಿಗಡ್ಡದ ಯಂಕಮ್ಮ ಮತ್ತು ಎಡಗಲ್ಲಿನ ಎಲ್ಲಮ್ಮ ಇಬ್ಬರೂ ಮಧ್ಯಸ್ಥಿಕೆ ವಹಿಸಿ ಅವರಿಬ್ಬರ ಮಧ್ಯದ ಕಲಹವನ್ನು ಅಂತ್ಯಗೊಳಿಸಿದರು.

Piddanayaka

 

ಹೆಚ್ಚಿನ ಸಂಪನ್ಮೂಲಕ್ಕಾಗಿ ಇಲ್ಲಿ CLICK HERE

Leave a Comment