History Tips-01: ಸಗರನಾಡು

History Tips-01: ಸಗರನಾಡು

 

History Tips-01:ಭೀಮಾಕಾರದ ಹೆಬ್ಬಂಡೆಗಳಿಂದ ಕಿಕ್ಕಿರಿದಿರುವ ಹಾಸು ಬಂಡೆಗಳನ್ನು ಯಥೇಶ್ಚವಾಗಿ ಹೊಂದಿರುವ ಪರ್ವತಾವಳಿಗಳ ಪ್ರದೇಶ ಸುರಪುರ ನಾಡು. ಇದನ್ನು ಬಹುಕಾಲದಿಂದಲೂ ಸಗರನಾಡು ವಲಯವೆಂದೂ ಕರೆಯಲಾಗುತ್ತ ಬರಲಾಗಿದೆ. ಸುರಪುರ ಪ್ರದೇಶವೆಂದರೆ ಸಗರ ನಾಡು ಎಂದೇ ಅರ್ಥ.

ಈ ಪ್ರದೇಶಕ್ಕೆ ಸಗರನಾಡು ಎಂದು ಹೆಸರು ಬರುವುದಕ್ಕೆ ಪುರಾಣದ ಹಿನ್ನೆಲೆಯೊಂದನ್ನು ಹೇಳಲಾಗುತ್ತಿದೆ. ಪುರಾಣ ಪ್ರಸಿದ್ಧ, ಪ್ರಚಂಡ ಬಲಶಾಲಿಯಾದ ಸಗರ ಚಕ್ರವರ್ತಿ ಈ ಪ್ರದೇಶವನ್ನು ಆಳಿದನೆಂದು ಈ ಪ್ರದೇಶದವರು ಬಹಳ ಹೆಮ್ಮೆಯಿಂದ ಹೇಳಿಕೊಂಡು ಬರುತ್ತಿದ್ದಾರೆ. ಇವನು ತನ್ನ ಅರವತ್ತು ಸಾವಿರ ಮೃತ ಪೂರ್ವಜರಿಗೆ ಮುಕ್ತಿ ಕೊಡುವುದಕ್ಕಾಗಿ ಶಿವನ ಜಡೆಯಿಂದ ಮಹಾಜಲದೇವಿ ಗಂಗೆಯನ್ನು ಭೂಲೋಕಕ್ಕೆ ತಂದ ಭಗೀರಥನ ಮುತ್ತಾತ. ಪೌರಾಣಿಕ ಕಥೆಯ ಪ್ರಕಾರ ಇಕ್ಷಾಕು ವಂಶದ ಅಂಬರೀಶನೆಂಬ ದೊರೆಯು ಪರಮ ಜ್ಞಾನಿಯಾಗಿದ್ದು ರಾಜರ್ಷಿಯೂ ಆಗಿದ್ದನು.

ಒಮ್ಮೆ ಅಂಬರೀಶನು ಬ್ರಹ್ಮ ಶಾಪಕ್ಕೆ ಗುರಿಯಾಗುತ್ತಾನೆ. ಮುಂದೆ ಇದೇ ವಂಶದ ಸತ್ಯವೃತನಿಗೆ (ತ್ರಿಶಂಕು) ಹರೀಶ್ಚಂದ್ರನೆಂಬ ಸತ್ಯಸಂಧ ಮಗನು ಹುಟ್ಟುತ್ತಾನೆ. ಇವನ ಮಗ ರೋಹಿತ, ರೋಹಿತನ ಮಗ ಹರೀತ, ಹರೀತನ ಮೊಮ್ಮಗನಾದ ಬಾಹುಕನು ಯುದ್ಧವೊಂದರಲ್ಲಿ ಪರಾಭವಗೊಂಡು ನಿರಾಶನಾಗಿ ತನ್ನ ಮಡದಿಯರೊಂದಿಗೆ ಅರಣ್ಯವನ್ನು ಸೇರಿದನು. ಆ ಸಮಯದಲ್ಲಿಯೇ ವೃದ್ದಾಪ್ಯದ ಕಾರಣದಿಂದ ಬಾಹುಕ ಸಾವನ್ನಪ್ಪುತ್ತಾನೆ. ಆನಂತರ ಅವನ ಮಡದಿಯು ಓರ್ವ ಮಹರ್ಷಿಯ ಸಂಪರ್ಕ ಹೊಂದಿ ಗರ್ಭವತಿಯಾಗುತ್ತಾಳೆ.

ಈಕೆಯ ಸವತಿಯರು ಮಾತ್ಸಲ್ಯದಿಂದ ಆಕೆಗೆ ತಿಳಿಯದ ಹಾಗೆ ಅವಳಿಗೆ ವಿಷ ಉಣ್ಣಿಸಿ ಉದರ ಭ್ರೂಣವನ್ನು ನಾಶಗೊಳಿಸುವ ಯತ್ನ ಮಾಡುತ್ತಾರೆ. ಆದರೂ ಆ ವಿಷವು ಅವಳ ಗರ್ಭದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ. ಮುಂದೆ ಮಗು ಜನಿಸುತ್ತದೆ.

ಗರ(ವಿಷ)ವನ್ನು ಉಂಡೂ ಬದುಕಿ ಜನಿಸಿದ ಮಗು ಮುಂದೆ ‘ಸಗರ’ನೆಂಬ ಹೆಸರಿಟ್ಟುಕೊಂಡು ಬೆಳೆದು ತನ್ನ ಕೀರ್ತಿ ಪ್ರತಾಪಗಳಿಂದ ಖ್ಯಾತನಾಗುತ್ತಾನೆ. ಮುಂದೆ ಅವನೇ ಈ ಪ್ರದೇಶವನ್ನು ಆಳಿ ಸಗರ ಸಾಮ್ರಾಟ ಎನ್ನಿಸಿಕೊಂಡು ಕೀರ್ತಿಶೇಷನಾಗುತ್ತಾನೆ. ಇವನ ಮೊಮ್ಮಗನೇ ಶಿವನ ಜಡೆಯಿಂದ ಗಂಗೆಯನ್ನು ಇಳಿಸಿ ತಂದು ತನ್ನ ಅರವತ್ತು ಸಹಸ್ರ ಮುತ್ತಾತರನ್ನು ಅವಳ ಮೂಲಕ ಸ್ವರ್ಗಕ್ಕೆ ಕಳುಹಿಸಿದ ಭಗೀರಥ, ಕಥೆ ಕಥೆಯೇ: ಸುಳ್ಳು ಸತ್ಯ ಎಂದು ಯೋಚನೆಗಿಳಿಯದೇ ಸುಮ್ಮನೆ ಕೇಳಿಸಿಕೊಂಡು ಮುನ್ನಡೆಯುವುದು.

ಈ ಪ್ರದೇಶ ಅತ್ಯಂತ ಪ್ರಾಚೀನ ಐತಿಹಾಸಿಕ ಹಿನ್ನೆಲೆಯನ್ನೂ ಹೊಂದಿದೆ. ಪ್ರಾಗೈತಿಹಾಸಿಕ ಕಾಲದ ಅವಶೇಷಗಳೂ ಈ ಭಾಗದಲ್ಲಿ ದೊರೆಯುತ್ತವೆ. ಕೆಲವೆಡೆ ಒಂದೊಂದೆ ದೊಡ್ಡ ಕಾಡುಗಲ್ಲುಗಳಿಂದಲೂ ಮತ್ತು ಕಲ್ಲಿನ ಗೂಡುಗಳಿಂದಲೂ ಮುಚ್ಚಲಾದ ಪ್ರಾಚೀನ ಕಾಲದ ಸಮಾಧಿಗಳೂ ಹೇರಳವಾಗಿ ಕಾಣ ಸಿಗುತ್ತವೆ. ಈ ತರಹದ ಸಮಾಧಿಗಳು ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಮಧ್ಯ ಏಶಿಯಾ ಹಾಗೂ ಭಾರತದ ಕೆಲವೆಡೆ ದೊರೆಯುತ್ತವೆ ಎಂಬ ಅಂಶವನ್ನು ಸುರಪುರದ ಆಂಗ್ಲ ಆಡಳಿತಾಧಿಕಾರಿ ಮೆಡೋಸ್ ಟೇಲರ್ ಹೇಳುತ್ತಾರೆ.

ಈ ಅವಶೇಷಗಳು ಸುಮಾರು ಮೂರು ಸಾವಿರ ವರ್ಷಗಳಾಚೆ ದ್ರಾವಿಡ ಜನಾಂಗವು ನಿರ್ಮಿಸಿದವುಗಳೆಂದು ಅವರು ಅಭಿಪ್ರಾಯ ಪಡುತ್ತಾರೆ. ಈ ಮಾದರಿಯ ಶವಾಗಾರಗಳು ಭೀಮಾತೀರದ ನೆಲ್ವಿಗಿ(ನೆಲೋಗಿ), ಜೇವರ್ಗಿ, ಆಂದೋಲಾ, ಮಾಲಗತ್ತಿ, ಕೊಡೆಕಲ್ಲು, ರಸ್ತಾಪುರ, ವಿಭೂತಿಹಳ್ಳಿ ಮತ್ತು ಯಾದಗಿರಿ ಸಮೀಪದ ಬೆಳೆಗೇರಿ ಮೊದಲಾದ ಸ್ಥಳಗಳಲ್ಲಿಯೂ ಕಂಡು ಬರುತ್ತವೆ.

ಹೀಗಾಗಿ ಈ ಭಾಗವು ಪ್ರಾಗೈತಿಹಾಸಿಕ ಕಾಲದಿಂದಲೂ ಅಸ್ತಿತ್ವದಲ್ಲಿತ್ತು ಎನ್ನುವುದಕ್ಕೆ ಇವುಗಳು ಸಾಕ್ಷಿಯನ್ನು ಒದಗಿಸುತ್ತವೆ. ಕ್ಯಾಪ್ಟನ್ ಮೆಡೋಸ್ ಟೇಲರ ಸುರಪುರದಲ್ಲಿದ್ದಾಗ ಅದೆಷ್ಟೋ ಬಾರಿ ಈ ಸ್ಥಳಗಳಿಗೆ ಭೇಟಿ ನೋಡಿ ಸಂಶೋಧನೆಗೆ ತೊಡಗಿದ್ದು ಉಂಟು.

ಇದೇ ಬಗೆಯ ಪೌರಾಣಿಕ ಹಿನ್ನೆಲೆಯನ್ನು ಹೊಂದಿದ ಇನ್ನೊಂದು ಸ್ಥಳವೆಂದರೆ ಇದೇ ಸಗರ ನಾಡಿಗೆ ಸೇರಿದ ಛಾಯಾಭಗವತಿ ಮಂದಿರ. ಇದಿಂದು ಪವಿತ್ರ ಯಾತ್ರಾ ಸ್ಥಳವಾಗಿದ್ದು ನಾರಾಯಣಪುರದ ಸನಿಹವಿದೆ. ಸೂಯ್ಯನ ಹೆಂಡತಿಯಾದ ಸಂಧ್ಯಾದೇವಿ ಅವನ (ಪ್ರತಾಪಕ್ಕೆ ಹೆದರಿ ತವರಿಗೆ ತೆರಳಲು ನಿಶ್ಚಯಿಸುತ್ತಾಳೆ.

ಆದರೆ ಆಕೆ ಹೊರಡುವ ಮುಂಚೆ ಸೂರದೇವನಿಗೆ ತನ್ನ ನಿರ್ಗಮನದ ಭಾಸವಾಗಬಾರದೆಂದು ತನ್ನ ಪ್ರತಿ ರೂಪ(ಛಾಯಾ)ವನ್ನು ನಿರ್ಮಿಸಿ ಆ ಸ್ಥಳದಲ್ಲಿ ಇರಿಸಿ ಹೊರಡುತ್ತಾಳೆ. ಆ ಛಾಯಾದೇವಿಯನ್ನು ತನ್ನ ಪತ್ನಿಯಂದೇ ಭ್ರಮಿಸಿದ ಸೂರದೇವ ಆಕೆಯೊಡನೆ ಸಂಪರ್ಕ ಹೊಂದುತ್ತಾನೆ. ಮುಂದೆ ಗುಟ್ಟು ಹೊರಬಿದ್ದಾಗ ಛಾಯೆಯನ್ನು ಅಲ್ಲಿಯೇ ಬಿಟ್ಟು ಸಂಧ್ಯಾ ಇರುವಲ್ಲಿಗೆ ಅವನು ತೆರಳುತ್ತಾನೆ.

ಸೂರನಾರಾಯಣ (ಈ ಸ್ಥಳಕ್ಕೆ ನಾರಾಯಣಪುರ ಎನ್ನುವ ಹೆಸರು ಬರಲೂ ಇದೇ ಕಾರಣ) ಹೊರಟು ಹೋದ ಮೇಲೆ ಛಾಯೆಯೂ ಅಸಹಾಯಕಳಾದ್ದರಿಂದ ಬಹಳ ಕಷ್ಟವನ್ನು ಅನುಭವಿಸಬೇಕಾಗಿ ಬರುತ್ತದೆ.

ಮುಂದೊಮ್ಮೆ ಸೂರದೇವನಿಗೆ ತನ್ನ ತಪ್ಪಿನ ಅರಿವಾಗಿ, ಪಶ್ಚಾತಾಪವೂ ಆಗಿ ಅದರ ಪ್ರಾಯಃಶ್ಚಿತಕ್ಕಾಗಿ ಅವನು ಪ್ರತಿ ನಿತ್ಯವೂ ಉದಯಕಾಲದಲ್ಲಿ ಛಾಯೆಯ ಪಾದಕ್ಕೆರಗುವಂತೆ ತನ್ನ ಪ್ರಥಮ ಕಿರಣಗಳನ್ನು ಅವಳ ಪಾದದಡಿ ಪಸರಿಸುವನಂತೆ.! ಇಂತಹ ಕೆಲವಾರು ಐತಿಹ್ಯಗಳು ಸಗರನಾಡೆಂದು ಪ್ರಸಿದ್ಧವಾದ ಸುರಪುರ ಪ್ರದೇಶದಲ್ಲಿ ಕೇಳಲು ಸಿಗುತ್ತವೆ.

ಇಲ್ಲಿನ ನೆಲದ ಮೇಲೆ ಕೃಷ್ಣಾ ಮತ್ತು ಭೀಮಾ ನದಿಗಳು ವರ್ಷದ ಹನ್ನೆರಡು ತಿಂಗಳು ತುಂಬಿ ಹರಿಯುತ್ತವೆ. ಕೆಲವೆಡೆ ಕಾಲು ನದಿಯೂ ಉಂಟು. ಅಂದರೆ ಆ ನದಿ ಪಾತ್ರದಲ್ಲಿ ನೀರನ್ನು ಪಾದಗಳ ಮೂಲಕ ಕ್ರಮಿಸಿಯೇ ಹೊರಡಬಹುದು.

ಉಳಿದೆಡೆ ದೋಣಿಗಳ ಮೂಲಕವೇ ಆ ಕಡೆಯಿಂದ ಈ ಕಡೆಗೆ; ಈ ಕಡೆಯಿಂದ ಆ ಕಡೆಗೆ ಕ್ರಮಿಸುವುದು ಅನಿವಾರವಾಗಿದೆ. ಮೇಲಿನಿಂದ ಹರಿದು ಬರುವ ಈ ಎರಡೂ ನದಿಗಳು ನಾರಾಯಣಪುರದ ಸನಿಹವೇ ಸಂಗಮಗೊಳ್ಳುತ್ತವೆ. ಈ ಎರಡೂ ಮಹಾನದಿಗಳ ನಡುವಿನ ಫಲವತ್ತಾದ ಕಪ್ಪು ಎರೆ ಮಣ್ಣಿನಿಂದ ಕೂಡಿರುವ ಕೃಷಿ ಭೂಮಿಯ ಪ್ರದೇಶಕ್ಕೆ(ದೋಅಬ್) ಸಗರನಾಡು ಅಥವಾ ಸಗರಗಡ್ಡೆ ಎಂದು ಜನ ಸಾಮಾನ್ಯರು ಕರೆಯುತ್ತಾರೆ.

ಈಗಿನ ಶಹಾಪುರದ ಸನಿಹ ಎತ್ತರದ ಬೆಟ್ಟವೊಂದರ ಮೇಲೆ ಒಂದು ದುರ್ಗವಿದೆ. ಅದರ ಸನಿಹವೇ ಹಳೆಸಗರ ಎಂಬ ಊರಿದ್ದು; ಈ ಊರಿನಿಂದಲೇ ಈ ದುರ್ಗಕ್ಕೆ ಸಗರದುರ್ಗವೆಂದು ಹೆಸರು ಬಂದಿದೆ ಎನ್ನಲಾಗಿದೆ. ಬಿಜಾಪುರ ಆದಿಲ್‌ಶಾಹಿಯ ದಾಖಲೆಗಳಲ್ಲಿ (ಸನ್ನದು) ಇದಕ್ಕೆ ‘ಮಾಮನಸರಡಾಬಾದ’ ಎಂದು ಉಲ್ಲೇಖಿಸಲಾಗಿದೆ.

ಅದಕ್ಕೂ ಪೂರ್ವದಲ್ಲೂ ಬಹುಮನಿ ಅರಸರ ಕಾಲದಲ್ಲಿ ಇದಕ್ಕೆ ಸಗರಗಢ ಎಂಬ ಹೆಸರೇ ಇದ್ದಿತು. ಈ ಪ್ರಾಂತ್ಯವು ಹಿಂದೆ ದೇವಗಿರಿ ಯಾದವರ ರಾಜ್ಯದಲ್ಲಿ ಇತ್ತೆಂದು; ಅಲ್ಲಾವುದ್ದೀನ್ ಖಿಲ್ಟಿಯ ಕಾಲಕ್ಕೆ ಮುಹಮದ್ ತುಘಲಕ್ ತನ್ನ ಚಿಕ್ಕಪ್ಪ/ಅಳಿಯನಾದ ಬಾಹುದ್ದೀನ್‌ ಗರ್ಷಪ್‌ನಿಗೆ ಜಹಗೀರಾಗಿ ಕೊಟ್ಟನೆಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ.

ಬಾಹುದ್ದೀನ್ ತುಘಲಕ್ ವಿರುದ್ಧ ದಂಗೆ ಎದ್ದು ಕಂಪಲಿಯ ಕುಮಾರ ರಾಮನ ಆಶ್ರಯಕ್ಕೆ ತೆರಳಿ ಇವನನ್ನು ಹುಡುಕಿಕೊಂಡು ಬಂದ ತುಘಲಕನ ಸೇನಾಪತಿ ಮಲಿಕ್ ಕಾಫರನ ಮೂಲಕ ಅವನ ಸೋಲಿಗೆ ಕಾರಣನಾದನೆಂದು; ಮುಂದೆ ಈತ ಸೆರೆ ಸಿಕ್ಕು ತುಘಲಕ್‌ನ ಆದೇಶದ ಮೇರೆಗೆ ಕಡಿತಕ್ಕೊಳಗಾಗಿ ಇತರ ಮಾಂಸದ ತುಂಡುಗಳೊಂದಿಗೆ ಸೇರಿಕೊಂಡು ಬಿರಿಯಾನಿಯಾಗಿ ಸೈನಿಕರ ಹಸಿದ ಉದರಗಳನ್ನು ಸೇರಿ ಜೀರ್ಣಗೊಂಡನೆಂದು ಇತಿಹಾಸ ಹೇಳುತ್ತದೆ.

ಬಹಮನಿಯರ ಕಾಲದಲ್ಲಿ ಇದು ಬಿಜಾಪುರ ಬಾದಶಹಾರ ವಶದಲ್ಲಿದ್ದು ಈ ದುರ್ಗ ಸೆರೆಯಾಳುಗಳನ್ನು ಇರಿಸುವ ಕಾರಾಗೃಹವೂ ಆಗಿತ್ತು.

ನಾನಾಸುರಪುರ ಸಂಸ್ಥಾನ ಎನ್ನುವ ಹೆಸರು ಬರುವ ಪೂರ್ವದಲ್ಲಿ ಅದು ವಾಗಣಗೇರಿ ಸಂಸ್ಥಾನವೆಂದು ಹೆಸರು ಪಡೆದಿತ್ತು. ಗೋಸಾಯಿ ಮನೆತನಕ್ಕೆ ಸೇರಿದ ಈ ವಂಶದವರು ಮೂಲತಃ ಕೃಷ್ಣನನ್ನು ತಮ್ಮ ಕುಲದ ದೈವವೆಂದು ಬಗೆದವರು. ಮೂಲತಃ ಇವರು ಶಸ್ತೋಪಜೀವಿಗಳಾದ ಬೇಡರು. ಹೋರಾಟದಲ್ಲಿಯೇ ತಮ್ಮ ಭವ್ಯ ಬದುಕನ್ನು ಕಟ್ಟಿಕೊಂಡವರು.

ರತ್ನಗಿರಿ ಮೂಲದ ಇವರ ಮೂಲ ಪುರುಷರು ಪಾಳೆಯಗಾರರು. ವಿಜಯನಗರದ ಅರಸರು ತಮ್ಮ ಸಾಮ್ರಾಜ್ಯದ ಉತ್ತರ ಮೇರೆಯನ್ನು ಮುಸಲ್ಮಾನ್ ಬಾದಶಹರ ದಾಳಿಯಿಂದ ಸಂರಕ್ಷಿಸುವುದಕ್ಕಾಗಿ; ಅವರನ್ನು ಸಮರ್ಥವಾಗಿ ಎದುರಿಸುವುದಕ್ಕಾಗಿ ಇವರನ್ನು ಕೃಷ್ಣಾ ಮತ್ತು ತುಂಗಭದ್ರಾ ನಡುವಿನ (ದೋಅಬ್) ಪ್ರದೇಶದಲ್ಲಿ ನೆಲೆಗೊಳಿಸಿದರು. ಮುಂಚೆ ಇವರು ವಿಜಯನಗರದ ಅರಸರ ಆಧೀನದಲ್ಲಿಯೇ ಇದ್ದವರು.

ಆ ಕಾರಣಕ್ಕಾಗಿಯೇ ವಿಜಯನಗರದ ಅರಸರು ಸುರಪುರಕ್ಕೆ ಒಂದೊಮ್ಮೆ ಆಗಮಿಸಿದರೆ ಅವರನ್ನು ಸ್ವಾಗತಿಸಲು ಇಲ್ಲಿನ ದೊರೆಗಳು ಪಾದಾಚರಿಯಾಗಿ ಅಗಸಿಯವರೆಗೆ ಹೋಗಿ ಸಾಷ್ಟಾಂಗ ನಮನಗಳನ್ನು ಸಲ್ಲಿಸಿ ಕುದುರೆಯನ್ನು ತಾವೇ ಹಿಡಿದು ನಗರದೊಳಗೆ ತರುವ ಪರಂಪರೆ ಇತ್ತು. ಯುದ್ಧ ಇವರ ಕುಲ ಕಸುಬು.

ಮುಂಚೆಯಾದರೂ ಗೋವುಗಳನ್ನು ಪಾಲನೆ ಮಾಡುತ್ತ ಬಂದ ಇವರು ಕಾಲಾಂತರದಲ್ಲಿ ತಮ್ಮ ಶೌಲ್ಯದ ಮುಖಾಂತರ ರಾಜ್ಯವೊಂದನ್ನು ಕಟ್ಟಿ ಎರಡು ನೂರು ವರ್ಷಗಳ ಕಾಲ ವಾಗಣಗೇರಿ, ಸುರಪುರ ಮೊದಲಾದವುಗಳನ್ನು ಆಳುತ್ತ ಬಂದವರು. ಈ ವಂಶದ ಮೂಲಪುರುಷ ನರಸಿಂಹನಾಯಕ. ಇವನ ಮಗ ವೀರಬೊಮ್ಮನಾಯಕ. ತದ ನಂತರದವರು ಸಿಂಗಪ್ಪನಾಯಕ, ಒಡೇರನಾಯಕ. ಒಡೇರನಾಯಕನ ಮಗನೇ ಕಲ್ಲಪ್ಪನಾಯಕ.

ಇವರೆಲ್ಲ ಮೂಲದಲ್ಲಿ ಸಾರಂಗಕೊಳ್ಳ ಮೊದಲಾದ ಸ್ಥಳಗಳಲ್ಲಿ ದೇಶಗತಿಯನ್ನು ಹೊಂದಿ ರಾಜ್ಯಭಾರ ಮಾಡುತ್ತಿದ್ದರೆಂದು ಪ್ರಾಚೀನ ಕೈಫಿಯತ್ (ದಾಖಲೆಗಳು)ಗಳಿಂದ ತಿಳಿದು ಬರುತ್ತದೆ. ಅಳಗೆ ನಿಧಾರಕನ ಗೋಸಾಯಿ ವಂಶದ ನಿಜವಾದ ಇತಿಹಾಸ ಆರಂಭವಾಗುವುದು ಕಲ್ಲಪ್ಪನಾಯಕನಿಂದಲೇ, ಈ ಮನೆತನ ಆಂಧ್ರಪ್ರದೇಶದ ರತ್ನಗಿರಿಯಿಂದ ವಲಸೆ ಬಂದು ರಾಯಚೂರು ದೋ-ಅಬ್ (ಕೃಷ್ಣ-ತುಂಗಭದ್ರಾ ನದಿಯ ಮಧ್ಯದ ಸ್ಥಳ) ಪ್ರದೇಶದಲ್ಲಿ ನೆಲೆ ನಿಂತರೆಂದು; ಕ್ರಮೇಣ ಕೃಷ್ಣಾನದಿಯ ಮಧ್ಯದ ನಡುಗಡ್ಡೆಗಳನ್ನು ವಶ ಪಡಿಸಿಕೊಂಡು ರಾಜಕೀಯ ಶಕ್ತಿಯಾಗಿ ಪ್ರಬಲವಾಗತೊಡಗಿದ್ದರೆಂದು ಹೇಳಲಾಗುತ್ತಿದೆ.

ಈ ಮನೆತನವು ಮೊದಲು ಮೈಸೂರು ದೇಶದ ರತ್ನಗಿರಿಯಿಂದ ಬಂದದ್ದಾಗಿದೆ. ಅಲ್ಲಿ ದೊಡ್ಡ ಪಾಳೆಗಾರರಾಗಿದ್ದು ಮುಸಲ್ಮಾನರ ಪ್ರಾರಂಭದ ಆಳ್ವಿಕೆಯನ್ನು ಎದುರಿಸುತ್ತ ತಮ್ಮ ಒಡೆಯರಿಗೆ ಸಹಾಯಕರಾಗಿದ್ದು; ಮುಸಲ್ಮಾನರು ಕಲಬುರ್ಗಿಯಲ್ಲಿ ಸ್ವತಂತ್ರರಾದಾಗ, ವಿಜಯನಗರದ ರಾಜರು ತಮ್ಮ ಸೀಮೆಯ ರಕ್ಷಣೆಗಾಗಿ ಕೃಷ್ಣಾ ಮತ್ತು ತುಂಗಭದ್ರಾ ನಡುವಿನ ಪ್ರದೇಶದಲ್ಲಿ ಈ ಬೇಡರನ್ನು ನೆಲೆಗೊಳಿಸಿದರು;

ಅವರಲ್ಲಿ ಈ ರತ್ನಗಿರಿಯ ಬೇಡರೂ ಇದ್ದರು’ (ಸುರಪುರ ಸಂಸ್ಥಾನದ ಇತಿಹಾಸ – ಕಪಟರಾಳ ಕೃಷ್ಣರಾವ ಪು: 251) ಎಂದೂ ಹೇಳಲಾಗುತ್ತಿದೆ. ಸಂಹಾರದ

ಈ ವಂಶದ ಕಲ್ಲಪ್ಪ ನಾಯಕನು ವಿಜಯನಗರ ಸಾಮ್ರಾಜ್ಯದಲ್ಲಿ ಉನ್ನತ ಹುದ್ದೆಯಲ್ಲಿದ್ದು; ನಂತರ ತನ್ನ ಏಳು ಜನ ಪರಾಕ್ರಮಿ ಮಕ್ಕಳೊಂದಿಗೆ ಸಾತಾರಾ ಮಹಾರಾಜರ ಸೇವೆಗೆ ಸಂದನು.

ಸಾತಾರಾ ದೊರೆಯು ಇವನ ಮತ್ತು ಈತನ ಮಕ್ಕಳ ಪರಾಕ್ರಮವನ್ನು ಅರಿತು ಅವರಿಗೆ ತನ್ನ ಆಧೀನದಲ್ಲಿ ಸೇವೆ ಮಾಡಲು ಅವಕಾಶ ಕೊಟ್ಟಿದ್ದಲ್ಲದೆ ತನ್ನ ಪ್ರಬಲ ವೈರಿಗಳಾದ ಸಾಮಂತಗಡ್ ಮತ್ತು ಪಾರಸಗಡ್ ಅರಸರ ವಿರುದ್ಧ ಯುದ್ಧ ಹೂಡಲು ಆದೇಶವಿತ್ತ. ಕಲ್ಲಪ್ಪನಾಯಕ ತನ್ನ ವೀರ ಮಕ್ಕಳ ಸಹಾಯದೊಂದಿಗೆ ಆ ಇಬ್ಬರೂ ದೊರೆಗಳನ್ನು ಸೋಲಿಸಿ ಸೆರೆ ಹಿಡಿದು ತಂದು ರಾಜನ ಮುಂದೆ ನಿಲ್ಲಿಸಿದ.

ಸಾತಾರಾ ಮಹಾರಾಜ ಸಂಭ್ರಮಪಟ್ಟು ತನ್ನ ಆಧೀನದಲ್ಲಿದ್ದ ಇಂಡಿ, ಹಿಪ್ಪರಗಿ, ಎಳಮೇಲಿ, ಸಿಂದಗಿ, ಬಾಗೇವಾಡಿ, ಮುದ್ದೇಬಿಹಾಳ, ನಿಡಗುಂದಾ, ನಾಲತವಾಡ ಹಾಗೂ ತಾಂಬಾ ಪರಗಣಿ (ತಾಲ್ಲೂಕು)ಗಳಲ್ಲಿ ಶೇಕಡಾ ಐದು ಸೋಡಿ ಆಧಾರದ ಮೇಲೆ ಕಂದಾಯ ವಸೂಲಿ ಮಾಡುವ ಅಧಿಕಾರವನ್ನು ಕೊಟ್ಟ. ಮತ್ತು ಕಲ್ಲಪ್ಪನಾಯಕನಿಗೆ 1200 ಕುದುರೆ ಸವಾರರ ಮೇಲಿನ ಸೇನಾಪತಿಯಾಗಿ ನೇಮಿಸಿದ.

ಇನ್ನೊಂದು ಐತಿಹ್ಯದ ಪ್ರಕಾರ ಕಲ್ಲಪ್ಪನಾಯಕನು ಸಾರಂಗ ಕೊಳ್ಳದಿಂದ ತುಂಬಳಕ್ಕೆ ವಲಸೆ ಬಂದನು. ಅಲ್ಲಿಂದ ಕಂಪಲಿ, ಗಂಗಾವತಿ, ತಾವರಗೇರಿ ಮುಖಾಂತರ ಮುದುಗಲ್ಲಿಗೆ ಕುಟುಂಬ ಸಹಿತ ಆಗಮಿಸಿ ಅಲ್ಲೇ ನೆಲೆಸುತ್ತಾನೆ. ಕಲ್ಲಪ್ಪನಾಯಕ ಮುದುಗಲ್ಲಿಗೆ ಬಂದು ನೆಲೆಸುವುದಕ್ಕೆ ಮುಖ್ಯ ಕಾರಣನಾದವನು ಅಲ್ಲಿನ ಕಿಲ್ಲೇದಾರನಾಗಿದ್ದ ಮುಸ್ತಫಾಖಾನ್ ಎನ್ನುವ ವ್ಯಕ್ತಿ ಎನ್ನುವ ಐತಿಹ್ಯವಿದೆ. ಕಲ್ಲಪ್ಪನಾಯಕ ಹನುಮಪ್ರಿಯ. ಇವರ ರಾಜಧ್ವಜದ ಚಿನ್ನೆಯೂ ಹನುಮನೇ.

ಹೀಗಾಗಿ ಇವರ ವಂಶದವರಲ್ಲಿ ಹಲವರನ್ನು ಹನುಮಪ್ಪ ನಾಯಕರೆಂದೇ ಕರೆಯುತ್ತ ಬರಲಾಗಿದೆ. ಕಲ್ಲಪ್ಪನಾಯಕನಿಗೆ ಏಳು ಜನ ಗಂಡು ಮಕ್ಕಳಲ್ಲಿ ಮೊದಲನೆಯ ಮಗನಾದ ಹಿರೇಹನುಮಪ್ಪನಾಯಕ ನಾಲತ್ವಾಡ, ಕೊಡೇಕಲ್ಲಿಗೆ ಆಗಮಿಸಿ ಅಲ್ಲಿನ ದೇಶಗತಿಯನ್ನು ಸಂಪಾದಿಸಿ ಆಳ್ವಿಕೆಯನ್ನು ಆರಂಭಿಸಿದ. ಅವನ ಸಂತತಿಯವರು ಕೊಡೆಕಲ್ಲಿನ ದೊರೆಗಳೆಂದು ಇತಿಹಾಸದಲ್ಲಿ ಕರೆಯಲ್ಪಟ್ಟಿದ್ದಾರೆ.

ಕಲ್ಲಪ್ಪನಾಯಕನ ಎರಡನೆಯ ಮಗ ಇಮ್ಮಡಿ ಹನುಮಪ್ಪನಾಯಕನು ಮೊದಲು ಸೊಂಡೂರು; ತದನಂತರ ಆದವಾನಿ ಸನಿಹದ ಕೋಸಗಿ ದೇಶಗತಿಯನ್ನು ಸಂಪಾದಿಸಿಕೊಂಡು ಅಲ್ಲಿಯೇ ವಾಸಿಸುತ್ತ ಆ ಭಾಗವನ್ನು ಆಳುತ್ತಾನೆ. ಇವನ ವಂಶಜರು ಕೋಸಗಿಯ ದೊರೆಗಳೆಂದು ಪ್ರಸಿದ್ಧರಾಗಿದ್ದಾರೆ.

ಕಲ್ಲಪ್ಪನಾಯಕನ ಮೂರನೆಯ ಮಗ ಮುಮ್ಮಡಿ ಹನುಮಪ್ಪನಾಯಕನು ಕೋಳಕೂರ, ರದ್ದೇವಾಡಿ ಮಾರ್ಗವಾಗಿ ಬೀದರ ಕೋಟೆಯ ಕಡೆಗೆ ಹೋಗಿ ಅಲ್ಲಿಯೇ ಅದಾವುದೋ ರಾಜ್ಯವಾಳುತ್ತಿದ್ದನಂತೆ. ಅವನ ಕುರಿತು ಹೆಚ್ಚಿಗೆ ಏನೂ ಸಂಶೋಧನೆ ನಡೆದಂತೆ ಕಾಣುವುದಿಲ್ಲ. ಇತಿಹಾಸ ಇವನ ಕುರಿತು ಮೌನವಹಿಸಿದೆ. ಕಲ್ಲಪ್ಪನಾಯಕನ ನಾಲ್ಕನೆಯ ಮಗ ಸೌಜಂಗ ಹನುಮನಾಯಕ, ಐದನೆಯ ಮಗ ಕರಿಹನುಮನಾಯಕ, ಆರನೆಯ ಮಗ ಬಿಲ್ಲಣಹನುಮನಾಯಕ ಇವರ ಕುರಿತಂತೆ ಹೆಚ್ಚಿನ ವಿವರಗಳೇನೂ ತಿಳಿದು ಬಂದಿರುವುದಿಲ್ಲ. ವ್ಯಾಪಕ ಸಂಶೋಧನೆಗೊಳಪಟ್ಟರೆ ವಿವರಗಳು ಲಭ್ಯವಾಗಬಹುದು.

ಕಲ್ಲಪ್ಪನಾಯಕನ ಏಳನೆಯ ಪುತ್ರ ಚಿನ್ನಹನುಮನಾಯಕನೆಂಬುವವನು ತನ್ನ ಮಕ್ಕಳೊಂದಿಗೆ ಕಕ್ಕೇರಿಯಲ್ಲಿ ನೆಲೆಸಿದನು. ಇವನ ವಂಶಜರೇ ಸುರಪುರ ಮತ್ತು ಗುಡಗುಂಟಿ ಸಂಸ್ಥಾನಗಳ ಮೂಲಪುರುಷರು. ಕಕ್ಕೇರಿ ಕುರಿತು ಒಂದು ಐತಿಹ್ಯವೂ ಇದೆ.

ಚಿಕ್ಕಹನುಮನಾಯಕನು ತನ್ನ ನಾಲ್ಕುಜನ ಬಂಧುಗಳೊಂದಿಗೆ ನಯರದುರ್ಗ-ಜಲದುರ್ಗಗಳ ಮೇಲೆ ಆಕ್ರಮಣ ಮಾಡಿ ಮುದಿರೆಡ್ಡಿ ಎನ್ನುವವನಿಂದ ಅವೆರಡೂ ಕಿಲ್ಲೆಗಳನ್ನು ಗೆದ್ದು ಜಲದುರ್ಗದಲ್ಲಿಯೇ ಬೀಡು ಬಿಟ್ಟ. ಅವನೊಂದು ದಿನ ಬೇಟೆಗೆ ಹೋದಾಗ ಅಲ್ಲೊಂದು ಕೌತುಕವನ್ನು ಕಂಡ. ಅಲ್ಲಿ ಗಿಡುಗನ ಬದಲಾಗಿ ಹಕ್ಕಿಯೇ ಅದನ್ನು ಬೇಟೆಯಾಡುವ ಭಯಂಕರ ದೃಶ್ಯ ಅವನ ಕಣ್ಣಿಗೆ ಬಿತ್ತು. ಚಿಕ್ಕಹನುಮನಾಯಕನು ಅದೇ ಸ್ಥಳದಲ್ಲಿ ತನ್ನ ರಾಜಧಾನಿಯನ್ನು ನಿರ್ಮಾಣ ಮಾಡಲು ನಿರ್ಧರಿಸಿ ಪುರವೊಂದನ್ನು ಕಟ್ಟಿಸಿ ಅದಕ್ಕೆ ಕಕ್ಕೇರಾ ಎಂದು ಹೆಸರಿಟ್ಟ. ಕಕ್ಕೆ ಎಂದರೆ ಹಕ್ಕಿ ಎಂದು ಅರ್ಥ. ಇದು ನಡೆದ ಕಾಲ ಕ್ರಿ.ಶ. 1523 ಎನ್ನಲಾಗಿದೆ.

ಹೀಗಾಗಿ ಕಕ್ಕೇರಾ ಗೋಸಾವಿ ವಂಶದ ಪ್ರಥಮ ರಾಜಧಾನಿಯಾಗಿ ಅವರಿಗೆ ಆಳ್ವಿಕೆಯ ವೇದಿಕೆಯನ್ನು ಒದಗಿಸಿತ್ತು ಎನ್ನಬಹುದು.

ಕ್ರಿ.ಶ. ಸುಮಾರು 1538ರಲ್ಲಿ ಚಿಕ್ಕಹನುಮನಾಯಕನ ಮರಣಾನಂತರ ಆತನ ಮಗ ಜಾಂಪನಾಯಕ ಅಥವಾ ಜಕ್ಕಪ್ಪದೇಸಾಯಿ ಅವನ ಉತ್ತರಾಧಿಕಾರಿಯಾದ. ಅವನ ಮರಣಾನಂತರ ಈತನ ಮಗ ಗಡ್ಡದ ಪಾಮನಾಯಕ ಉತ್ತರಾಧಿಕಾರಿಯಾಗಿ ಕಕ್ಕೇರಾದಿಂದಲೇ ಆಡಳಿತ ನಡೆಸಿದ. ಇವನಿಗೆ ಪರಾಕ್ರಮಿಗಳಾದ ಗಡ್ಡಿಲಿಂಗನಾಯಕ, ಗಡ್ಡಿಪಿಡ್ಡನಾಯಕರೆಂಬ ಇಬ್ಬರು ಗಂಡುಮಕ್ಕಳು ಹುಟ್ಟಿದ್ದರು. ಹಿರಿಯ ಮಗ ಗಡ್ಡಿಲಿಂಗನಾಯಕನ ಶೌರ ಪ್ರತಾಪಗಳಿಗೆ ಮೆಚ್ಚಿ ವಿಜಯಪುರದ ಅರಸು ಅವನಿಗೆ ಗುಡಗುಂಟಿ ಸಂಸ್ಥಾನದ ಜಹಗೀರು ನೀಡಿ ಗೌರವಿಸಿದ.

ಜಕ್ಕಪ್ಪದೇಸಾಯಿ ಕಕ್ಕೇರಿಯಲ್ಲಿದ್ದಾಗ ಅವನ ಇಬ್ಬರೂ ಮಕ್ಕಳು ಕೃಷ್ಣಾನದಿಯ ಮಧ್ಯ ಅಲ್ಲಲ್ಲಿ ಇರುವ ನಡುಗಡ್ಡೆ(ಗಡ್ಡಿ)ಯಲ್ಲಿ ವಾಸಿಸುತ್ತಿದ್ದರು. ಕೃಷ್ಣಾನದಿಯ ಮಧ್ಯ ಅಲ್ಲಲ್ಲಿ ಎರಡು-ಮೂರು ಮೈಲು ಉದ್ದಗಲದ ಭೂ ಭಾಗವಿದ್ದು ಅಂಥ ನಡುಗಡ್ಡೆಗಳನ್ನು ಹಳ್ಳಿಯ ಜನ ಆಡುಭಾಷೆಯಲ್ಲಿ ‘ಗಡ್ಡಿ’ ಎನ್ನುವುದನ್ನು ರೂಢಿ ಮಾಡಿಕೊಂಡಿದ್ದಾರೆ. ನೀರದೇವರಗಡ್ಡಿ, ದೇವರಗಡ್ಡಿ, ಜಂಗಿನಗಡ್ಡಿ, ಮೇಲಿನಗಡ್ಡಿ, ನೀಲಕಂಠರಾಯನಗಡ್ಡಿ, ಬೆಣಚಿನಗಡ್ಡಿ ಎಂದು ಮುಂತಾಗಿ ಹಲವು ನಡುಗಡ್ಡೆಗಳು ಕೃಷ್ಣಾ ನದಿಯ ಮಧ್ಯದ ಬಯಲಿನಲ್ಲಿ ಇವೆ.

ಇವೆಲ್ಲ ನಡುಗಡ್ಡೆಗಳು ಜಕ್ಕಪ್ಪದೇಸಾಯಿಯ ಆಡಳಿತಕ್ಕೆ ಒಳಪಟ್ಟವುಗಳು. ಅವನ ಮಕ್ಕಳಾದ ಲಿಂಗನಾಯಕ ಮತ್ತು ಪಿಡ್ಡನಾಯಕರು ಆ (ನಡುಗಡ್ಡೆಗಳಲ್ಲಿ ವಾಸ ಮಾಡುತ್ತಿದ್ದ ಕಾರಣ ಅವರನ್ನು ಗಡ್ಡಿಲಿಂಗನಾಯಕ, ಗಡ್ಡಿಪಿಡ್ಡನಾಯಕ ಎಂದು ಕರೆಯುವುದು ವಾಡಿಕೆಯಾಗಿ ಬೆಳೆದು ಬಂದಿದೆ.

ಜಕ್ಕಪ್ಪನಾಯಕನ ಹಿರಿಯ ಮಗ ಲಿಂಗನಾಯಕನು ಗುಡಗುಂಟಿ ಸಂಸ್ಥಾನದ ಮೂಲ ಪುರುಷನು. ಈ ಚಿಕ್ಕ ಸಂಸ್ಥಾನವು ಹೈದರಾಬಾದ ಪೋಲೀಸ್ ಕಾರಾಚರಣೆಯಾಗುವವರೆಗೆ (ಕ್ರಿ.ಶ.1948) ಅಸ್ತಿತ್ವದಲ್ಲಿತ್ತು. ಲಿಂಗಪ್ಪನಾಯಕನು ರಾಜಕಾರಕ್ಕಾಗಿ ವಿಜಯಪುರಕ್ಕೆ (ಬಿಜಾಪುರ) ಹೋಗಿದ್ದಾಗ (ಹಲವು ವರ್ಷಗಳ ನಂತರ) ಶೇಖಮಿನಾಜ ಎಂಬ ಸರದಾರನಿಂದ ಕೊಲ್ಲಲ್ಪಟ್ಟನು.

ಲಿಂಗನಾಯಕನು ಕಕ್ಕೇರಿಯ ಹಳ್ಳಿಗಳ ಮತ್ತು ಸಮತ ಬೈಡಬಾಳದ ದೇಸಾಯಿ ಆಗಿದ್ದನಲ್ಲದೆ; ಆ ಪರಗಣೆಯ ಸರದೇಸಾಯಿಯಾಗಿದ್ದನು. ಲಿಂಗನಾಯಕನ ಮರಣದ ನಂತರ ಆತನ ಮಗನಾದ ಷರ್ಜಾ(ಹುಲಿ) ಎಂಬ ಬಿರುದುಳ್ಳ ಜಡೆಸೋಮನಾಯಕನಿಗೆ ಆದಿಲ್‌ಶಹಾ ಈ ಭಾಗವನ್ನು ಇನಾಮು ರೂಪದಲ್ಲಿ ಕೊಟ್ಟನು ಎಂದು ಶಾಸನದೊಂದರಲ್ಲಿ ಉಲ್ಲೇಖವಾಗಿದೆ.

History Tips

 

ಮತ್ತಷ್ಟು ಮಾಹಿತಿಗಾಗಿ – www.mastermitra.com ಸಂಪರ್ಕಿಸಿ

Leave a Comment