New Tax Regime:ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ಲಾಭ ಇಲ್ಲ: ಹೂಡಿಕೆ ಹೇಗೆ? ಪ್ರಶ್ನೆಗೆ ಉತ್ತರ-01
New Tax Regime: ನನ್ನ ವಯಸ್ಸು 45. ಮಕ್ಕಳ ವಿದ್ಯಾಭ್ಯಾಸ, ಮದುವೆ, ನಿವೃತ್ತಿ ಜೀವನ ಮುಂತಾದ ಗುರಿಗಳಿಗೆ ವಿವಿಧ ಯೋಜನೆಗಳಲ್ಲಿ ಹತ್ತಾರು ವರ್ಷಗಳಿಂದ ಹೂಡಿಕೆ ಮಾಡುತ್ತಿದ್ದೇವೆ.
ಆದಾಯ ತೆರಿಗೆ ಉಳಿಸುವ, ಕಡಿಮೆ ಮಾಡಿಕೊಳ್ಳಲು ಹಲವು ದೀರ್ಘಾವಧಿಯ ಹೂಡಿಕೆಗಳನ್ನು ಅಂದರೆ ಇಕ್ವಿಟಿ, ಗೃಹಸಾಲ (ಬಡ್ಡಿ ಹಾಗೂ ಕಂತಿನ ರಿಯಾಯಿತಿ), ಎನ್ ಪಿಎಸ್, ಪಿಪಿಎಫ್, ಸುಕನ್ಯಾ ಸಮೃದ್ಧಿ, ವಿಮಾ ಪಾಲಿಸಿಗಳು ಮುಂದಾದವುಗಳಲ್ಲಿ ಮಾಡಿದ್ದೇವೆ. ಈಗ ಹೊಸ ಆದಾಯ ತೆರಿಗೆ ಪದ್ದತಿಯಲ್ಲಿ ಇವುಗಳಲ್ಲಿ ಹಲವು ಹೂಡಿಕೆಗಳು ತಮ್ಮ ಮೂಲ ಲಾಭವನ್ನು ಅಂದರೆ ತೆರಿಗೆ ವಿನಾಯಿತಿ ಲಾಭ ನೀಡುತ್ತಿಲ್ಲ.
ಇನ್ನೂ ಕೆಲವು ಹೂಡಿಕೆಗಳನ್ನು ಕೂಡ ಮುಂದಿನ 15-20 ವರ್ಷಗಳಲ್ಲಿ ಸರಕಾರವು ಸುಧಾರಣೆ ನೆಪದಲ್ಲಿ ಬದಲಾಯಿಸುವ ಸಾಧ್ಯತೆಗಳಿವೆ ಎನಿಸುತ್ತಿದೆ.
ಹೊಸ ಪದ್ದತಿ ಅನುಸರಿಸಿದರೆ ಯಾವಾಗಲೂ ತೆರಿಗೆ ವಿಷಯದಲ್ಲಿ ಲಾಭವಾಗಬಹುದು ಎಂಬ ಖಾತ್ರಿ ಕೂಡ ಇಲ್ಲವಾಗಿದೆ. ಈಗ ನನ್ನ ಹೂಡಿಕೆಗಳನ್ನು ಮರು ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ ಹಾಗೂ ಕೆಲವೊಮ್ಮೆ ನಷ್ಟವನ್ನೂ ಉಂಟು ಮಾಡಬಹುದು.
ಉದ್ದೇಶಿತ ಗುರಿ ತಲುಪುವ ಬಗ್ಗೆ ಖಾತ್ರಿ ಇಲ್ಲದ ಈ ಪರಿಸ್ಥಿತಿಯಲ್ಲಿ ಯಾವ ಮಾರ್ಗ ಅನುಸರಿಸಬೇಕು ತಿಳಿಯುತ್ತಿಲ್ಲ. ನಿಮ್ಮ ಸಲಹೆ ಏನು?
ಉತ್ತರ: ನಿಮ್ಮ ಚಿಂತನೆ ಬಹಳ ಪ್ರಾಮಾಣಿಕವಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಬಹುತೇಕ ಹಳೆಯ ತೆರಿಗೆ ಉಳಿಸುವ ಹೂಡಿಕೆಗಳ (ಪಿಪಿಎಫ್, ಎನ್ಪಿಎಸ್, ಸುಕನ್ಯಾ ಸಮೃದ್ಧಿ ಯೋಜನೆ, ವಿಮಾ ಯೋಜನೆಗಳು) ಪ್ರಯೋಜನ ಕಡಿಮೆಯಾಗಿರುವುದು ನಿಜ. ಇಂತಹ ಸಂದರ್ಭದಲ್ಲಿ ಹೂಡಿಕೆಗಳನ್ನು ಮರು ಹೊಂದಾಣಿಕೆ ಮಾಡುವುದು ಕಷ್ಟಕರವಾದರೂ, ಕೆಲವು ಕ್ರಮಗಳು ಸಹಾಯ ಮಾಡಬಹುದು.
ಹೊಸ ತೆರಿಗೆ ಪದ್ಧತಿಯಲ್ಲಿ ಕಡಿಮೆ ದರಗಳು ಇದ್ದು ತೆರಿಗೆ ವಿನಾಯಿತಿ ಮಿತಿ ಕೂಡ ಹೆಚ್ಚಿದೆ. ಆದರೆ ಹಳೆಯ ಪದ್ಧತಿಯಲ್ಲಿ ಇರುವಂತೆ 80ಸಿ, 80ಡಿ, ಮನೆ ಸಾಲದ ಕಂತು, ಬಡ್ಡಿ ಮುಂತಾದವುಗಳ ವಿನಾಯಿತಿ ಇಲ್ಲ. ನಿಮ್ಮ ಈಗಿನ ವಯಸ್ಸಿಗೆ ಅನುಗುಣವಾಗಿ ಮುಂದಿನ 15-20 ವರ್ಷಗಳು ನಿಮ್ಮ ನಿವೃತ್ತಿ ಜೀವನದ ಯೋಜನೆಗೆ ಮುಖ್ಯ. ನೀವು ಈಗಾಗಲೇ ಸಮತೋಲಿತ ಹೂಡಿಕೆ ಮಾಡಿದ್ದೀರಿ, ಇದು ಸ್ವಾಗತಾರ್ಹ.
ಪ್ರತಿ ವರ್ಷ ಹಳೆಯ ಹಾಗೂ ಹೊಸ ಪದ್ಧತಿಯ ಪ್ರಕಾರ ತೆರಿಗೆ ಲೆಕ್ಕ ಹಾಕಿ, ಯಾವುದು ಲಾಭದಾಯಕವೋ ಅದನ್ನು ಆಯ್ಕೆ ಮಾಡಿಕೊಳ್ಳುವುದು ಸ್ವಾಭಾವಿಕವಾಗಿ ಒಳ್ಳೆಯ ಕ್ರಮ.
ಉದಾಹರಣೆಗೆ, ನಿಮ್ಮ ಗೃಹಸಾಲದ ಬಡ್ಡಿ, ಎನ್ ಪಿಎಸ್, ಪಿಪಿಎಫ್, ಜೀವವಿಮೆ ಹಾಗೂ ಆರೋಗ್ಯ ವಿಮೆ ಪ್ರೀಮಿಯಂ ಕಡಿತ, ಮಕ್ಕಳ ಶಾಲೆಯ ಡೊನೇಶನ್ (80ಜಿ) ಮುಂತಾದವು ಹೆಚ್ಚಾಗಿದ್ದರೆ ಹಳೆಯ ತೆರಿಗೆ ಪದ್ಧತಿ ಲಾಭದಾಯಕ ಆಗಬಹುದು. ಇಲ್ಲದಿದ್ದರೆ ಹೊಸ ಪದ್ದತಿ ಸರಳ ಮತ್ತು ಲಾಭದಾಯಕ.
ಹೂಡಿಕೆ ಮರು ಹೊಂದಾಣಿಕೆ ಬಗ್ಗೆ ಯೋಚಿಸುವುದಾದರೆ, ಷೇರುಪೇಟೆ ಆಧಾರಿತ ಹೂಡಿಕೆಗಳು ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ಕೊಡುವ ಸಾಧ್ಯತೆಗಳಿವೆ. ಬಂಡವಾಳ ವೃದ್ಧಿ ತೆರಿಗೆ ಪಾವತಿಸಿದ ಮೇಲೂ ಹೆಚ್ಚಿನ ಸಂಪತ್ತು ಸೃಷ್ಟಿಸಲು ಸಹಾಯಕವಾಗಬಹುದು.
ನಿವೃತ್ತಿಯ ಗುರಿಗೆ ಈ ವರ್ಗದ ಹೂಡಿಕೆ ಮುಂದುವರಿಸಬಹುದು. ಆಯ್ಕೆಯ ಬಗ್ಗೆ ಎಚ್ಚರ ಅಗತ್ಯ. ಇಕ್ವಿಟಿ ಮ್ಯೂಚುವಲ್ ಫಂಡ್ಸ್ನಲ್ಲಿ ಮುಂದುವರಿಸಬಹುದು.
ಪಿಪಿಎಫ್, ಸುಕನ್ಯಾ, ಎನ್ಪಿಎಸ್ ಡೆಟ್ ಪೋರ್ಷನ್, ಆರ್ಬಿಐ ಬಾಂಡ್ಗಳ ರಿಟರ್ನ್ಸ್ ಕಡಿಮೆಯಾದರೂ ಸ್ಥಿರ ಆದಾಯ ಕೊಡುತ್ತವೆ. ಇವು ನಿರ್ದಿಷ್ಟ ಗುರಿ ಆಧಾರಿತ ಹೂಡಿಕೆಗಳಾದ್ದರಿಂದ ಮುಂದುವರಿಸುವುದು ಸೂಕ್ತ.
ಅವಶ್ಯಕತೆಯೇ ಮೂಲ ಗುರಿಯಾದ ಟರ್ಮ್ ಇನ್ಸೂರೆನ್ಸ್ ಹಾಗೂ ಆರೋಗ್ಯ ವಿಮೆಯ ಸೂಕ್ತ ಮೊತ್ತ ನಿರ್ಧರಿಸಿ ಪಡೆದುಕೊಳ್ಳಿ. ಇನ್ನು ಈಗಾಗಲೇ ಮಾಡಿರುವ ಮನೆಯ ಮೇಲಿನ ಹೂಡಿಕೆ ಯಾವುದೇ ಕಾಲಕ್ಕೆ ಲಾಭದಾಯಕ. ಸಾಧ್ಯವಾದರೆ ಸಾಲವನ್ನು ಬೇಗ ತೀರಿಸುವ ಮೂಲಕ ಬಡ್ಡಿ ಹೊರೆ ಕಡಿಮೆ ಮಾಡಿಕೊಳ್ಳಬಹುದು.
ನಿವೃತ್ತಿ ಜೀವನಕ್ಕೆ ಬೇಕಾದ ಸಂಪತ್ತಿನ ಗುರಿ, ಹಣದುಬ್ಬರ ಪರಿಗಣಿಸಿ ನಿಗದಿ ಮಾಡಿಕೊಳ್ಳಿ. ಇಕ್ವಿಟಿ ಪ್ಲಸ್ ಡೆಟ್ ಮಿಶ್ರಿತ (60:40 ಅಥವಾ 50:50) ಮೂಲಕ ಹೂಡಿಕೆ ಮಾಡಿ. ಪಿಪಿಎಫ್, ಎನ್ಪಿಎಸ್ ಮುಂದುವರಿಸಿ. ಏಕೆಂದರೆ ಅದು ನಿವೃತ್ತಿ ಜೀವನಕ್ಕೆ ಬೇಕಾದ ಸಂಪತ್ತನ್ನು ಒದಗಿಸಿಕೊಡುತ್ತದೆ. ಸುಕನ್ಯಾ ಸಮೃದ್ಧಿ ಮಕ್ಕಳ ಭವಿಷ್ಯಕ್ಕೆ ಅವಶ್ಯಕ.
ಸರಕಾರದ ತೆರಿಗೆ ನೀತಿಗಳ ಬದಲಾವಣೆಗಳ ಬಗ್ಗೆ ನಿಮ್ಮ ದೃಷ್ಟಿಕೋನ ಸರಿಯಾಗಿದೆ. ಸರಕಾರ ತನ್ನ ನಿಲುವುಗಳನ್ನು ಬದಲಾಯಿಸುತ್ತಲೇ ಇರುತ್ತದೆ. ಅದರ ಪರಿಣಾಮ, ಅನುಕೂಲ, ಪ್ರತಿಕೂಲಗಳೇನೇ ಇದ್ದರೂ ಅನುಸರಿಸುವುದು ಅನಿವಾರ್ಯ. ಆದಾಯ, ದ್ರವ್ಯತೆ, ನಷ್ಟ ಸಂಭಾವೃತೆ ನೋಡಿಕೊಂಡು ಹೂಡಿಕೆ ಮಾಡಿ. ಸಾಧ್ಯವಾದಷ್ಟೂ ಸಂಪತ್ತು ಬೆಳೆಸುವ ಕಡೆ ಗಮನಕೊಡಿ. ಕಾಲಕಾಲಕ್ಕೆ ಹೂಡಿಕೆಗಳನ್ನು ಪರಾಮರ್ಶಿಸಿ, ವಿನಾಯಿತಿಗಳ ಮೇಲೆ ಹೆಚ್ಚು ಅವಲಂಬಿಸದೆ, ಗುರಿ ಆಧಾರಿತ ಹೂಡಿಕೆ ವ್ಯವಸ್ಥೆಯನ್ನು ಅನುಸರಿಸಿ.
