Psychology Explained: ಮನೋವಿಜ್ಞಾನದ ಬಗ್ಗೆ ಒಂದಿಷ್ಟು ಮಾಹಿತಿ-01
Psychology Explained: ಮನುಷ್ಯ ಸ್ವಭಾವತಃ ಕುತೂಹಲಕಾರಿ. ತನ್ನ ಸುತ್ತಮುತ್ತಲಿನ ವಿದ್ಯಮಾನಗಳ ಬಗ್ಗೆ ತಿಳಿಯಲು ಉತ್ಸುಕನಾಗಿರುತ್ತಾನೆ. ಜೀವವಿಕಾಸದ ಹಾಗೂ ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಗಳ ಪರಿಣಾಮವಾಗಿ ಮನುಷ್ಯರ ನಡವಳಿಕೆಯಲ್ಲಿ ವೈವಿಧ್ಯತೆ ಕಂಡುಬರುತ್ತದೆ. ಇದರಿಂದಾಗಿ ಅವನ ಮನಸ್ಸಿನಲ್ಲಿ ಹತ್ತು ಹಲವು ಪ್ರಶ್ನೆಗಳು ಮೂಡುತ್ತವೆ. ಉದಾಹರಣೆಗೆ :- ಎಲ್ಲರೂ ಮನುಷ್ಯರೇ ಆದರೂ ಅವರ ವರ್ತನೆಗಳು ಭಿನ್ನವಾಗಿರಲು ಕಾರಣ ಏನು? ಒಬ್ಬ ಬುದ್ದಿವಂತ, ಒಬ್ಬ ದಡ್ಡ. ಒಬ್ಬ ಧೈರ್ಯಶಾಲಿ, ಒಬ್ಬ ಅಂಜುಬುರುಕ, ಒಬ್ಬ ಒಳ್ಳೆಯ ಕಲಾವಿದ. ಹಾಡುಗಾರ, ಮತ್ತೊಬ್ಬ ಕವಿ, ವಿಜ್ಞಾನಿ, ಇತ್ಯಾದಿ ವೈವಿಧ್ಯತೆಗಳಿಗೆ ಕಾರಣ ಏನು ಎಂಬ ಪ್ರಶ್ನೆಗಳು ಏಳುತ್ತವೆ.
ಈ ಎಲ್ಲ ಪ್ರಶ್ನೆಗಳಿಗೆ ಮನೋವಿಜ್ಞಾನ ಉತ್ತರ ನೀಡಬಲ್ಲದು. ಮನುಷ್ಯನ ವರ್ತನೆಯನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ ನಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲದು. ಅಲ್ಲದೆ, ಮನುಷ್ಯ ಹಾಗೂ ಪ್ರಾಣಿಗಳ ಕಲಿಕೆ, ಸಮಸ್ಯೆ ಬಗೆಹರಿಸುವ ವಿಧಾನ, ಸಾಮಾಜಿಕ ಹೊಂದಾಣಿಕೆ, ಇತ್ಯಾದಿಗಳ ಬಗ್ಗೆ ಸಮಗ್ರ ಅಧ್ಯಯನ ಮಾಡುತ್ತದೆ.
ಮನೋವಿಜ್ಞಾನದ ಬಗ್ಗೆ ತಪ್ಪು ಕಲ್ಪನೆಗಳು (Misconceptions about Psychology)
ಬಹುಮಂದಿಯ ನಂಬಿಕೆ ಏನೆಂದರೆ ಮನೋವಿಜ್ಞಾನ ಕೇವಲ ಮನೋರೋಗಗಳ ಬಗ್ಗೆ, ಹಾಗೂ ಅಪಸಾಮಾನ್ಯ ವರ್ತನೆ ಬಗ್ಗೆ ಅಧ್ಯಯನ ಮಾಡುತ್ತದೆ ಎಂಬುದು. ಇದು ತಪ್ಪು. ಮನೋವಿಜ್ಞಾನವು ಎಲ್ಲ ರೀತಿಯ (ಸಾಮಾನ್ಯ ಹಾಗೂ ಅಪಸಾಮಾನ್ಯ) ವರ್ತನೆಗಳ ಬಗ್ಗೆ ಅಧ್ಯಯನ ಮಾಡುತ್ತದೆ. ಕಲಿಕೆ, ನೆನಪಿನ ಶಕ್ತಿ, ಮರೆವು, ಕನಸು, ಮುಂತಾದ ವಿಷಯಗಳನ್ನು ಕುರಿತು ಸಹ ಅಧ್ಯಯನ ಮಾಡುತ್ತದೆ. ಇತರೆ ವಿಷಯಗಳಾದ ಸಂವೇಗ, ಪ್ರೇರಣೆ, ಬುದ್ಧಿಶಕ್ತಿ, ವ್ಯಕ್ತಿತ್ವ, ತೀರ್ಮಾನ ಕೈಗೊಳ್ಳುವಿಕೆ, ಸಮಸ್ಯೆಗಳ ಪರಿಹಾರ, ವರ್ತನೆಯ ಮೇಲೆ ಪ್ರಭಾವ ಬೀರುವ ದೈಹಿಕ, ಶಾರೀರಿಕ, ಮಾನಸಿಕ ಹಾಗೂ ಸಾಮಾಜಿಕ ಅಂಶಗಳನ್ನು ಕುರಿತು ಸಹ ಅಧ್ಯಯನ ಮಾಡುತ್ತದೆ. ವ್ಯಕ್ತಿ ತನ್ನನ್ನು ತಾನು ಅರ್ಥ ಮಾಡಿಕೊಳ್ಳಲು ಹಾಗೂ ಇತರರನ್ನು ಅರ್ಥಮಾಡಿಕೊಳ್ಳಲು ಬೇಕಾದ ಕೌಶಲಗಳನ್ನು ಕಲಿಸುತ್ತದೆ. ಹೀಗೆ ಮನೋವಿಜ್ಞಾನವು ಸಾಮಾನ್ಯ ವ್ಯಕ್ತಿ ಹಾಗೂ ಆತನ ವರ್ತನೆಯನ್ನೂ ಸಹ ಅಧ್ಯಯನ ಮಾಡುತ್ತದೆ.
ಮನೋವಿಜ್ಞಾನವು ಬದುಕಿನ ಎಲ್ಲ ಆಯಾಮಗಳನ್ನು ಮುಟ್ಟುತ್ತದೆ. ದಿನದಿಂದ ದಿನಕ್ಕೆ ಸಂಕೀರ್ಣಗೊಳ್ಳುತ್ತಿರುವ ಸಮಾಜದಲ್ಲಿ ಮನೋವಿಜ್ಞಾನವು ಮಾನವನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಮನೋವಿಜ್ಞಾನಿಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಲ್ಲಿ ಕೆಲವು ನಿರ್ದಿಷ್ಟ ಹಾಗೂ ಪ್ರಾಯೋಗಿಕ ಸ್ವರೂಪ ಉಳ್ಳವುಗಳಾಗಿರುತ್ತವೆ. ಅವುಗಳಲ್ಲಿ ಹೆಸರಿಸಬಹುದಾದ ಕೆಲವು ಸಮಸ್ಯೆಗಳೆಂದರೆ, ಮಾದಕವಸ್ತು ವ್ಯಸನಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದು, ಜನಾಭಿಪ್ರಾಯ ತಿಳಿಯಲು ಸಮೀಕ್ಷಾ ವಿಧಾನ ಅನುಸರಿಸುವುದು ಹಾಗೂ ಧೂಮಪಾನ ನಿಗ್ರಹಿಸುವ ಬಗ್ಗೆ ಜನರನ್ನು ಸಜ್ಜುಗೊಳಿಸುವುದು, ಮುಂತಾದ ಸಮಸ್ಯೆಗಳನ್ನು ಕುರಿತು ಮನೋವಿಜ್ಞಾನಿಗಳು ಅಧ್ಯಯನ ಮಾಡುವರು.
ಉತ್ತಮ ಪ್ರಜೆಗಳನ್ನು ರೂಪಿಸಲು ಮಕ್ಕಳನ್ನು ಬೆಳೆಸುವ ವಿಧಾನದ ಬಗ್ಗೆ, ಅಪಸಾಮಾನ್ಯ ವರ್ತನೆಗಳ ಬಗ್ಗೆ, ಜಾತಿ ಮತ ಭೇದ-ಭಾವ ತೊಲಗಿಸುವ ಬಗ್ಗೆ. ಸಮಾಜದಲ್ಲಿ ಹಿಂಸೆ ಹಾಗೂ ಕ್ರೌರ್ಯಕ್ಕೆ ಕುಟುಂಬ ಹಾಗೂ ಸಾಮಾಜಿಕ ಸ್ಥಿತಿಗತಿಯು ಹೇಗೆ ಕಾರಣ, ಎಂಬಿತ್ಯಾದಿ ವಿಷಯಗಳ ಬಗ್ಗೆ ಕೂಡ ಮನೋವಿಜ್ಞಾನಿಗಳು ಅಧ್ಯಯನ ಮಾಡುವರು.
ಮನೋವಿಜ್ಞಾನದ ಉಗಮ (Emergence of psychology):-
ಮನೋವಿಜ್ಞಾನವು ಎರಡು ಮೂಲಗಳಿಂದ ಉಗಮವಾಗಿದೆ. ಆ ಮೂಲಗಳೆಂದರೆ, ತತ್ವಶಾಸ್ತ್ರ ಹಾಗೂ ವಿಜ್ಞಾನ. ದೇಹ ಮನಸ್ಸುಗಳ ನಡುವಿನ ಸಂಬಂಧ ಕುರಿತು ಹಾಗೂ ಹೊಸ ಜ್ಞಾನ ಸಂಪಾದನೆ ಹೇಗೆ ಎಂಬ ಬಗ್ಗೆ ತತ್ವಶಾಸ್ತ್ರ ತಿಳಿಸಿಕೊಟ್ಟರೆ, ವಿಜ್ಞಾನವು ವೈಜ್ಞಾನಿಕ ಹಿನ್ನೆಲೆಯಲ್ಲಿ ವ್ಯಕ್ತಿಯ ವರ್ತನೆಯನ್ನು ಅಧ್ಯಯನ ಮಾಡುವುದು ಹೇಗೆ ಎಂದು ತಿಳಿಸುತ್ತದೆ.
ಈಗಾಗಲೇ ವಿಷದಪಡಿಸಿರುವಂತೆ ಮನೋವಿಜ್ಞಾನವು ಮಾನವ ಜೀವನದ ವಿವಿಧ ಮುಖಗಳನ್ನು ಅಧ್ಯಯನ ಮಾಡುವುದರಿಂದ ಮನೋವಿಜ್ಞಾನದಲ್ಲಿ ಆಳವಾದ ಪರಿಣಿತಿ ಪಡೆಯಬಯಸದವರೂ ಸಹ ಮನೋವಿಜ್ಞಾನದ ಕೆಲವು ಮೂಲಭೂತ ಅಂಶಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಅದಕ್ಕಾಗಿ ಮನೋವಿಜ್ಞಾನದ ಬಗ್ಗೆ ಒಂದು ಪರಿಚಯಾತ್ಮಕ ತರಬೇತಿ ನೀಡುವುದು ಒಳ್ಳೆಯದು. ಇದರಿಂದ ಜನರ ಮನೋಭಾವ ಹಾಗೂ ಪ್ರತಿಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು. ಮನೋವಿಜ್ಞಾನದ ಮೂಲ ಉದ್ದೇಶವೆಂದರೆ, ಜನ ವಿಮರ್ಶಾತ್ಮಕವಾಗಿ ಯೋಚಿಸಲು ಮತ್ತು ತಮ್ಮ ವೃತ್ತಿಯನ್ನು ಹೆಚ್ಚು ಸಮರ್ಥವಾಗಿ ನಿರ್ವಹಿಸಲು ತರಬೇತಿ ನೀಡುವುದಾಗಿರುತ್ತದೆ. ಮಾನವ ಸ್ವಭಾವದಲ್ಲಿ ಭಿನ್ನತೆ ಹಾಗೂ ವರ್ತನೆಯ ವೈವಿಧ್ಯತೆಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕೆಂಬುದು ಮನೋವಿಜ್ಞಾನಿಗಳ ಆಶಯವಾಗಿರುತ್ತದೆ.
ಮನೋವಿಜ್ಞಾನದ ಪದ ಅರ್ಥ ವಾಖ್ಯೆ (meaning and definitions) :-
ಇತರ ವಿಜ್ಞಾನಗಳಿಗೆ ಹೋಲಿಸಿದರೆ ಮನೋವಿಜ್ಞಾನವು ಇತ್ತೀಚೆಗೆ ಬೆಳೆದು ಬಂದ ವಿಜ್ಞಾನವಾಗಿದೆ. ಮನೋವಿಜ್ಞಾನದಲ್ಲಿ ಆಗುತ್ತಿರುವ ಮಹತ್ತರ ಅಧ್ಯಯನಗಳ ಪರಿಣಾಮವಾಗಿ ಮನೋವಿಜ್ಞಾನದ ತತ್ವಗಳು ಹಾಗೂ ಪರಿಕಲ್ಪನೆಗಳಲ್ಲಿ ಕಾಲದಿಂದ ಕಾಲಕ್ಕೆ ಸಾಕಷ್ಟು ಉತ್ತಮ ಬದಲಾವಣೆ ಕಂಡುಬರುತ್ತದೆ.
ಅರ್ಥ:
1. ಮನೋವಿಜ್ಞಾನ ಎಂಬ ಪದದ ಸಮಾನಾಂತರ ಇಂಗ್ಲೀಷ್ ಪದ ‘ಸೈಕಾಲಜಿ’ (Psychology) ಈ ಸೈಕಾಲಜಿ ಎಂಬ ಇಂಗ್ಲೀಷ್ ಪದವು psyche ಮತ್ತು logos ಎಂಬ ಎರಡು ಗ್ರೀಕ್ ಪದಗಳಿಂದ ರೂಪುಗೊಂಡಿದೆ. psyche (ಸೈಕಿ) ಎಂದರೆ ‘soul’ (ಆತ್ಮ) ಎಂದು ಅರ್ಥ, logos (ಲೋಗೊಸ್) ಎಂದರೆ study (ಅಧ್ಯಯನ) ಎಂದು ಅರ್ಥ. ಆದ್ದರಿಂದ “ಮನೋವಿಜ್ಞಾನ ಎಂದರೆ ಆತ್ಮವನ್ನು ಕುರಿತು ಅಧ್ಯಯನ ಮಾಡುವುದು” ಎಂದಾಗುತ್ತದೆ.
ವ್ಯಾಖ್ಯೆಗಳು:
1. ನಂತರದ ದಿನಗಳಲ್ಲಿ “ಮನೋವಿಜ್ಞಾನ ಎಂದರೆ ಮನಸ್ಸನ್ನು ಕುರಿತು ಅಧ್ಯಯನ ಮಾಡುವುದು” ಎಂದು ನಿರೂಪಿಸಲಾಯಿತು (study of mind).
ಆದರೆ ‘ಆತ್ಮ’ ಎಂದರೇನು? ಅದು ಹೇಗಿದೆ? ಅದರ ಆಕಾರ, ರೂಪ, ಬಣ್ಣ, ಇತ್ಯಾದಿ ಯಾರಿಗೂ ತಿಳಿಯದ ಕಾರಣ, ಮನೋವಿಜ್ಞಾನ ಆತ್ಮವನ್ನು ಕುರಿತು ಅಧ್ಯಯನ ಮಾಡುತ್ತದೆ ಎಂದು ಹೇಳುವುದು ಸರಿಯಲ್ಲ ಎಂದು ಅನೇಕ ಮನೋವಿಜ್ಞಾನಿಗಳು ವಾದಿಸಿದರು. ಅದೇರೀತಿ ಮನಸ್ಸು (mind) ಎಂದರೇನು? ಅದು ಹೇಗಿದೆ? ಎಂಬ ಬಗ್ಗೆ ಕೂಡ ಯಾರಿಗೂ ತಿಳಿಯದ ಕಾರಣ, ಮನೋವಿಜ್ಞಾನ ಮನಸ್ಸನ್ನು ಕುರಿತು ಅಧ್ಯಯನ ಮಾಡುತ್ತದೆ ಎಂದು ಹೇಳುವುದು ಕೂಡ ಸರಿಯಲ್ಲ ಎಂದು ಈ ವ್ಯಾಖ್ಯೆಯನ್ನು ಕೂಡ ಮನೋವಿಜ್ಞಾನಿಗಳು ತಿರಸ್ಕರಿಸಿದರು.
2. ಹತ್ತೊಂಭತ್ತನೆಯ ಶತಮಾನದ ಅಂತ್ಯದ ವೇಳೆಗೆ ‘ವಿಲಿಯಮ್ ವೊಂಟ್ ಹಾಗೂ ಸಂಗಡಿಗರು, ‘ಮನೋವಿಜ್ಞಾನ ಎಂದರೆ ಪ್ರಜ್ಞಾನುಭವಗಳನ್ನು ಕುರಿತು ಅಧ್ಯಯನ ಮಾಡುವುದು’ ಎಂದು ವ್ಯಾಖ್ಯಾನಿಸಿದರು.
ಪ್ರಜ್ಞಾನುಭವ ಎಂದರೆ ‘ನಮ್ಮ ಪರಿಸರದ ಹಾಗೂ ಮಾನಸಿಕ ಪ್ರಕ್ರಿಯೆಗಳ ಅರಿವು’ ಎಂದು ತಿಳಿಸಿದರು. ವಿಲಿಯಮ್ ವೂಂಟ್, ಜರ್ಮನಿಯ ಮನೋವಿಜ್ಞಾನಿ, ಲೀಪ್‌ಜ್ಜಿಗ್ ಎಂಬ ಊರಿನಲ್ಲಿ 1879ರಲ್ಲಿ ‘ಪ್ರಥಮ ಮನೋವಿಜ್ಞಾನ ಪ್ರಯೋಗ ಶಾಲೆಯನ್ನು ಸ್ಥಾಪಿಸಿದನು’.
ವಿಲಿಯಮ್ ವೊಂಟ್‌ನ ವ್ಯಾಖ್ಯೆ ಕೂಡ ತೃಪ್ತಿಕರವಾಗಿಲ್ಲ ಎಂದು ಮನೋವಿಜ್ಞಾನಿಗಳು ಟೀಕಿಸಿದರು. ಏಕೆಂದರೆ, ವ್ಯಕ್ತಿಯ ಪ್ರಜ್ಞಾನುಭವಗಳು ಆತನಿಗೆ ಮಾತ್ರ ತಿಳಿಯುತ್ತವೆಯೇ ಹೊರತು, ಇತರರಿಗೆ ತಿಳಿಯುವುದಿಲ್ಲ. ಆದ್ದರಿಂದ ಈ ವ್ಯಾಖ್ಯೆ ಕೂಡ ಸರಿಯಲ್ಲ ಎಂದು ತಿರಸ್ಕೃತವಾಯಿತು. ಜೆ.ಬಿ.ವಾಟ್ಸನ್ ಒಂದು ಕಡೆ ಹೀಗೆ ಟೀಕಿಸುತ್ತಾನೆ. “ಎಲ್ಲಿಯವರೆಗೆ ಮನೋವಿಜ್ಞಾನ ಮನಸ್ಸನ್ನು ಕುರಿತು ಅಧ್ಯಯನ ಮಾಡುತ್ತದೋ ಅಲ್ಲಿಯವರೆಗೆ ಅದು ವಿಜ್ಞಾನವಾಗಿರಲು ಸಾಧ್ಯವಿಲ್ಲ”, ಎಂದು ಕಟುವಾಗಿ ಟೀಕಿಸುತ್ತಾನೆ.
ನಂತರ, 1920 ರಿಂದ 1950 ನಡುವೆ ಮನೋವಿಜ್ಞಾನವನ್ನು, ‘ವರ್ತನೆಯನ್ನು ಕುರಿತು ಅಧ್ಯಯನ ಮಾಡುವ ವಿಜ್ಞಾನ’ ಎಂದು ನಿರೂಪಿಸಿದರು. ಮನುಷ್ಯ ಅಥವಾ ಪ್ರಾಣಿಯ ವರ್ತನೆಯನ್ನು ನೇರವಾಗಿ ಗಮನಿಸಿ ಅರ್ಥಮಾಡಿಕೊಳ್ಳಲು ಸಾಧ್ಯ. ಹಾಗಾಗಿ ಮನೋವಿಜ್ಞಾನಿಗಳ ಗಮನ ಸಹಜವಾಗಿ ಜೀವಿಗಳ ವರ್ತನೆಯನ್ನು ಅಧ್ಯಯನ ಮಾಡುವ ಬಗ್ಗೆ ಹೆಚ್ಚು ಒತ್ತು ನೀಡಿತು.
ಮಗು ಹೇಗೆ ಬಡಬಡಿಸುತ್ತದೆ? ಒಂದು ಇಲಿ ಪಂಜರದಲ್ಲಿ ಹೇಗೆ ವರ್ತಿಸುತ್ತದೆ? ಒಂದು ಮಗು ಆಟದಲ್ಲಿ ಹೇಗೆ ನಿರತವಾಗಿದೆ? ಇತ್ಯಾದಿ ಚಟುವಟಿಕೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವಾಗ, ಜೀವಿಯ ದೈಹಿಕ ಹಾಗೂ ಮಾನಸಿಕ ಅಂಶಗಳು ಮತ್ತು ಹೊರಗಿನ ಪರಿಸರ, ಹೇಗೆ ವರ್ತನೆಯ ಮೇಲೆ ಪ್ರಭಾವಬೀರುತ್ತವೆ ಎಂಬ ಬಗ್ಗೆ ಅಧ್ಯಯನ ಮಾಡಲಾಗುವುದು. ಜೊತೆಗೆ ಹಾವಭಾವಗಳ ಮತ್ತು ಮಾತುಗಳ ಅಧ್ಯಯನಕ್ಕೆ ಆದ್ಯತೆ ನೀಡಲಾಗುವುದು. ವ್ಯಕ್ತಿಯ ಆಲೋಚನೆಗಳು, ಭಾವನೆಗಳು ಹಾಗೂ ಕ್ರಿಯೆಗಳು ಮನೋವಿಜ್ಞಾನದ ಅಧ್ಯಯನ ವಸ್ತುಗಳಾದವು. ವ್ಯಕ್ತಿಯ ಸಂವೇದನೆ, ಅವಧಾನ, ಪ್ರತ್ಯಕ್ಷಾನುಭವ, ನೆನಪಿನ ಶಕ್ತಿ, ಶಾರೀರಿಕ ಬೆಳವಣಿಗೆ ಹಾಗೂ ಕ್ರಿಯೆಗಳ ಅಧ್ಯಯನವೂ ಸಹ ಮನೋವಿಜ್ಞಾನದ ಅಧ್ಯಯನ ವಿಷಯಗಳಾದವು.
ಮನೋವಿಜ್ಞಾನದ ಸ್ಕೂಲ ಉದ್ದೇಶ ಮಾನವನ ವರ್ತನೆಯ ವಿವರಣೆ. ಪ್ರಾಗುಪ್ತಿ ಹಾಗೂ ವರ್ಣನೆ ಜೊತೆಗೆ, ಮಾನವನ ವರ್ತನೆಯಲ್ಲಿ ಹಾಗೂ ಅವನ ಬದುಕಿನಲ್ಲಿ ಉತ್ತಮ ಬದಲಾವಣೆ ತರುವುದೂ ಕೂಡ ಮನೋವಿಜ್ಞಾನದ ಕೆಲಸವಾಗಿದೆ.
ಮನೋವಿಜ್ಞಾನ – ಆಧುನಿಕ ವ್ಯಾಖ್ಯೆ (modern definition of psychology) :
“ಮಾನವನ ವರ್ತನೆಯನ್ನು ಮತ್ತು ಮಾನಸಿಕ ಪ್ರಕ್ರಿಯೆಗಳನ್ನು ಅಧ್ಯಯನ ಮಾಡುವುದೇ ಮನೋವಿಜ್ಞಾನ”. ಸಂಜ್ಞಾನಾತ್ಮಕ ಮನೋವಿಜ್ಞಾನವು ಮಾನಸಿಕ ಪ್ರಕ್ರಿಯೆಗಳ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿದೆ. ಸಂಜ್ಞಾನಾತ್ಮಕ ಪ್ರಕ್ರಿಯೆ ಒಂದು ವಿಶಾಲ ಅರ್ಥವುಳ್ಳ ಪದವಾಗಿದ್ದು ಮನಸ್ಸು ಹೇಗೆ ತನ್ನ ಸುತ್ತಲಿನ ವಿದ್ಯಮಾನಗಳನ್ನು ಅರ್ಥೈಸುತ್ತದೆ ಎಂಬುದಕ್ಕೆ ಸಂಬಂಧಿಸಿದೆ. ಸಂಜ್ಞಾನಾತ್ಮಕ ಕ್ರಿಯೆಯು ಆಲೋಚನೆ, ಅರಿವು, ಗ್ರಹಿಕೆ, ನೆನಪು, ಹಾಗೂ ಗಮನಹರಿಸುವಿಕೆಯನ್ನು ಒಳಗೊಂಡಿರುತ್ತದೆ.
ಜೆ.ಬಿ. ವಾಟ್ಸನ್, 1913ರಲ್ಲಿ ವರ್ತನಾವಾದಕ್ಕೆ ನಾಂದಿ ಹಾಡಿದನು. ಅವನು ‘ಮನೋವಿಜ್ಞಾನವು ನಮ್ಮ ಅವಗಾಹನೆಗೆ ನಿಲುಕುವ ವರ್ತನೆಗಳನ್ನು ಕುರಿತು ಅಧ್ಯಯನ ಮಾಡಬೇಕು’ ಎಂದು ಪ್ರತಿಪಾದಿಸಿದನು.
ಸಾಮಾಜಿಕ ಹಾಗೂ ನೈಸರ್ಗಿಕ (ಸ್ವಾಭಾವಿಕ) ವಿಜ್ಞಾನವಾಗಿ ಮನೋವಿಜ್ಞಾನ:
ಮನೋವಿಜ್ಞಾನ ಮೂಲತಃ ಮಾನವನ ಪರಸ್ಪರ ವರ್ತನೆಯ ಅಧ್ಯಯನ ಮಾಡುತ್ತದೆ. ವ್ಯಕ್ತಿ – ವ್ಯಕ್ತಿ ನಡುವಿನ ವರ್ತನೆ, ವ್ಯಕ್ತಿ, ಸಮೂಹದ ನಡುವಿನ ವರ್ತನೆ, ಸಮೂಹ ವ್ಯಕ್ತಿ ನಡುವಿನ ವರ್ತನೆ ಹಾಗೂ ಸಮೂಹ ಸಮೂಹದ ನಡುವಿನ ವರ್ತನೆಯನ್ನು ಕುರಿತು ಅಧ್ಯಯನ ಮಾಡುವುದರಿಂದ ಅದು ಒಂದು ಸಾಮಾಜಿಕ ಮನೋವಿಜ್ಞಾನವಾಗಿದೆ.
ಮಾನವನ ವರ್ತನೆಗೆ ಅವನ ಶರೀರವೇ ಆಧಾರ. ಆದ್ದರಿಂದ ಅವನ ದೇಹದಲ್ಲಿ ಅನುವಂಶೀಯ ವರ್ಣತಂತುಗಳು, ಗುಣಾಣುಗಳು, ನರಮಂಡಲ, ಗ್ರಂಥಿಗಳು ಹಾಗೂ ಜ್ಞಾನೇಂದ್ರಿಯಗಳು ಹೇಗೆ ವರ್ತನೆಯ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಮನೋವಿಜ್ಞಾನ ಅಧ್ಯಯನ ಮಾಡುತ್ತದೆ. ಆದ್ದರಿಂದ ಮನೋವಿಜ್ಞಾನ ಒಂದು ಸ್ವಾಭಾವಿಕ ವಿಜ್ಞಾನವೂ ಆಗಿದೆ ಎಂದು ಹೇಳಬಹುದು.
ಮನೋವಿಜ್ಞಾನದ ಬೆಳವಣಿಗೆಯಲ್ಲಿ ಕೆಲವು ಮೈಲಿಗಲ್ಲುಗಳು:
1879- ವಿಲಿಯಂ ವೂಂಟ್‌ನು ಪ್ರಥಮ ಮನೋವಿಜ್ಞಾನ ಪ್ರಯೋಗ ಶಾಲೆಯನ್ನು ಜರ್ಮನಿಯ ಲೀಪ್‌ಜಿಗ್‌ನಲ್ಲಿ ಸ್ಥಾಪಿಸಿದನು.
1890- ವಿಲಿಯಂ ಜೇಮ್ಸ್ನು ‘ಮನೋವಿಜ್ಞಾನದ ತತ್ವಗಳು’ (Principles of Psychology) ಎಂಬ ಗ್ರಂಥವನ್ನು ಪ್ರಕಟಿಸಿದನು.
1895- ರಚನಾವಾದವು ಮನೋವಿಜ್ಞಾನದ ಒಂದು ಅಂಗವಾಗಿ ರೂಪುಗೊಂಡಿತು.
1900 – ಸಿಗ್ನಂಡ್ ಫ್ರಾಯ್ಡ್ ಮನೋವಿಶ್ಲೇಷಣೆ ವಾದವನ್ನು ಮಂಡಿಸಿದನು.
1904 – ಶಾಸ್ತ್ರೀಯ ಅನುಬಂಧ ಕಲಿಕೆಗೆ ಸಂಬಂಧಿಸಿದಂತೆ ನಡೆಸಿದ ಅಧ್ಯಯನಕ್ಕಾಗಿ ಐ.ವಿ. ಪವ್‌ಲವ್‌ಗೆ ನೊಬೆಲ್ ಪ್ರಶಸ್ತಿ ನೀಡಲಾಯಿತು.
1905 – ಬೀನೆ – ಸೈಮನ್ ಪ್ರಥಮ ಬುದ್ಧಶಕ್ತಿ ಪರೀಕ್ಷೆ ರಚಿಸಿದರು.
1916- ಭಾರತದ ಕೊಲ್ಕತ್ತ ವಿಶ್ವವಿದ್ಯಾಲಯದಲ್ಲಿ ಪ್ರಥಮ ಬಾರಿಗೆ ಮನೋವಿಜ್ಞಾನ ವಿಭಾಗ ಆರಂಭಿಸಲಾಯಿತು.
1920 – ಜರ್ಮನಿಯಲ್ಲಿ ಸಮಗ್ರ (ಗೆಸ್ಟಾಲ್ಟ್) ಮನೋವಿಜ್ಞಾನದ ಜನನ.
1922- ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಸ್ಥೆಯಲ್ಲಿ ಮನೋವಿಜ್ಞಾನವನ್ನು ಸೇರ್ಪಡೆ ಮಾಡಲಾಯಿತು.
1924 – ಭಾರತೀಯ ಮನೋವಿಜ್ಞಾನ ಸಂಸ್ಥೆಯ ಸ್ಥಾಪನೆ ಮಾಡಲಾಯಿತು.
1924 – ಜೆ.ಬಿ. ವಾಟ್ಸನ್ ‘ವರ್ತನಾವಾದ’ (Behaviourism)ಎಂಬ ಗ್ರಂಥವನ್ನು ಪ್ರಕಟಿಸಿದನು. ಇದು ವರ್ತನಾವಾದದ ನಾಂದಿಗೆ ಕಾರಣವಾಯಿತು.
1928–ಎನ್.ಎನ್. ಸೇನ್ ಗುಪ್ತ ಮತ್ತು ರಾಧಾಕಮಲ್ ಮುಖರ್ಜಿ ಅವರಿಂದ ‘ಸಾಮಾಜಿಕ ಮನೋವಿಜ್ಞಾನ’ (Social Psychology) ಎಂಬ ಪುಸ್ತಕ ಪ್ರಕಟಣೆ. (ಲಂಡನ್ ಆಲೇನ್ ಮತ್ತು ಅನ್‌ವಿನ್)
1949 – ಭಾರತೀಯ ರಕ್ಷಣಾ ವಿಜ್ಞಾನ ಸಂಸ್ಥೆಯಲ್ಲಿ ಮನೋವಿಜ್ಞಾನ ಸಂಶೋಧನಾ ವಿಭಾಗದ ಸ್ಥಾಪನೆ.
1951-ಮಾನವತಾವಾದಿ ಕಾರ್ಲ್ ರೋಜರ್ಸ್ ‘ಕಕ್ಷಿ ಕೇಂದ್ರಿತ ಚಿಕಿತ್ಸಾ ವಿಧಾನ’ವನ್ನು ಪ್ರಕಟಿಸಿದನು.
1953- ಬಿ.ಎಫ್. ಸ್ಕಿನ್ನರ್ ‘ವಿಜ್ಞಾನ ಮತ್ತು ಮಾನವ ವರ್ತನೆ’ (Science and human behavior) ಎಂಬ ಗ್ರಂಥ ಪ್ರಕಟಿಸಿದನು. ಇದರಿಂದ ವರ್ತನವಾದಕ್ಕೆ ಹೆಚ್ಚು ಬಲಬಂದಾಯಿತು.
1954-ಅಲಹಾಬಾದ್‌ನಲ್ಲಿ ಬ್ಯೂರೋ ಆಫ್ ಸೈಕಾಲಜಿ ಸ್ಥಾಪನೆಯಾಯಿತು.
1954- ಮಾನವತಾವಾದಿ ಅಬ್ರಹಾಂ ಮಾಸ್ಲೊ ಪ್ರೇರಣೆ & ವ್ಯಕ್ತಿತ್ವ (Motivation and Personality) ಎಂಬ ಕೃತಿಯನ್ನು ಪ್ರಕಟಿಸಿದನು.
1955- ಬೆಂಗಳೂರಿನಲ್ಲಿ ‘ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ’ ಯನ್ನು (ನಿಮ್ಹಾನ್ಸ್) ಸ್ಥಾಪಿಸಲಾಯಿತು.
1962- ರಾಂಚಿಯಲ್ಲಿ ಮನೋರೋಗ ಚಿಕಿತ್ಸೆಗಾಗಿ ಆಸ್ಪತ್ರೆ ತೆರೆಯಲಾಯಿತು.
1973 – ‘ಯಾವುದೇ ಪೂರ್ವಾನುಭವ ಅಥವಾ ಕಲಿಕೆ ಇಲ್ಲದೆ ನಿರ್ಧಿಷ್ಟ ಪ್ರಭೇದದ ಪ್ರಾಣಿಗಳ ಜನ್ಮದತ್ತ ವರ್ತನಾವೈವಿಧ್ಯದ ಬಗ್ಗೆ ನಡೆಸಿದ ಅಧ್ಯಯನಕ್ಕಾಗಿ ಕನರಡ್ ಲಾರೆನ್ಸ್ ಮತ್ತು ನಿಕೋ ಟಿನ್‌ಬೆರೆಜ್‌ನ್‌ಗೆ ನೊಬೆಲ್ ಪ್ರಶಸ್ತಿ ನೀಡಲಾಯಿತು.
1978 – ತೀರ್ಮಾನ ಕೈಗೊಳ್ಳುವ (Decision making) ಬಗ್ಗೆ ಹರ್‌ಬರ್ಟ್ ಸೈಮನ್ ಮಾಡಿದ ಅಧ್ಯಯನಕ್ಕೆ ನೊಬೆಲ್ ಪ್ರಶಸ್ತಿ ನೀಡಲಾಯಿತು.
1981- ‘ಮೆದುಳಿನಲ್ಲಿ ದೃಷ್ಟಿಕೋಶಗಳು’ ( Vision cells in the brain )ಎಂಬ ಬಗ್ಗೆ ನಡೆಸಿದ ಅಧ್ಯಯನಕ್ಕಾಗಿ ಡೇವಿಡ್ ಹೂಬೆಲ್ ಮತ್ತು ಟಾರ್‌ಸ್ಟನ್ ವೈಸೆಲ್‌ಗೆ ನೊಬೆಲ್ ಪ್ರಶಸ್ತಿ ನೀಡಲಾಯಿತು.
1981- ‘ಮೆದುಳಿನ ವಿದಳನ’ (Split Brain) ದ ಬಗ್ಗೆ ನಡೆಸಿದ ಅಧ್ಯಯನಕ್ಕಾಗಿ ರೋಜರ್ ಸ್ಪೆರಿಗೆ ನೊಬೆಲ್ ಪ್ರಶಸ್ತಿ ನೀಡಲಾಯಿತು.
1989- ರಾಷ್ಟ್ರೀಯ ಮನೋವಿಜ್ಞಾನ ಅಕಾಡೆಮಿ (ಎನ್‌ಒಪಿ)ಯನ್ನು ಭಾರತದಲ್ಲಿ ಸ್ಥಾಪಿಸಲಾಯಿತು.
1997 ರಾಷ್ಟ್ರೀಯ ಮೆದುಳು ಸಂಶೋಧನಾ ಕೇಂದ್ರವನ್ನು ಹರಿಯಾಣದ ಗುರುಗಾಂವ್‌ನಲ್ಲಿ ಸ್ಥಾಪಿಸಲಾಯಿತು.
2002- ‘ಅನಿಶ್ಚಿತತೆಯಲ್ಲಿ ಮಾನವನ ತೀರ್ಪು ಹಾಗೂ ತೀರ್ಮಾನ ಕೈಗೊಳ್ಳುವಿಕೆ’ ಎಂಬ ಬಗ್ಗೆ ಸಂಶೋಧನೆಗಾಗಿ ಡೇನಿಯಲ್ ಕನ್ವೆಮಾನ್‌ಗೆ ನೊಬೆಲ್ ಪ್ರಶಸ್ತಿ ನೀಡಲಾಯಿತು.
2005 – ‘ಆರ್ಥಿಕ ವರ್ತನೆಯಲ್ಲಿ ಸಂಘರ್ಷ ಮತ್ತು ಸಹಕಾರವನ್ನು ಅರ್ಥಮಾಡಿಕೊಳ್ಳಲು ಕ್ರೀಡಾ ಸಿದ್ಧಾಂತದ ಅನ್ವಯ’ ಎಂಬ ಬಗ್ಗೆ ಮಾಡಿದ ಅಧ್ಯಯನಕ್ಕೆ ಥಾಮಸ್ ಶೆಲ್ಲಿಂಗ್ ನೊಬೆಲ್ ಪ್ರಶಸ್ತಿ ಪಡೆದರು.
2011- ‘ದೈನಂದಿನ ಜೀವನದಲ್ಲಿ ಜನರು ಯಾಕೆ ನಿಟ್ಟುಸಿರು ಬಿಡುವರು’ ಎಂಬ ಬಗ್ಗೆ ನಾರ್ವೆಯ ಓಸ್ಟೋ ವಿಶ್ವವಿದ್ಯಾಲಯದ ಕಾರ್ಲ್ ಹಲ್ವಾರ್ ಮತ್ತು ಟೈಜೈನ್ ರವರು ನಡೆಸಿನ ಅಧ್ಯಯನಕ್ಕೆ ನೊಬೆಲ್ ಪ್ರಶಸ್ತಿ ನೀಡಲಾಯಿತು.
2012- ‘ಈಫೆಲ್ ಗೋಪುರ ಎಡಕ್ಕೆ ವಾಲುತ್ತಿರುವುದರಿಂದ ಅದು ಚಿಕ್ಕದಾಗಿ ಕಾಣುತ್ತಿದೆ’ ಎಂಬ ಬಗ್ಗೆ ನಡೆಸಿದ ಅಧ್ಯಯನಕ್ಕಾಗಿ ಅನಿತ ಇಲಾಂಡ್, ರಾಲ್ಪಾವಾನ್ ಮತ್ತು ಟುಲಿಯೊ ಗ್ವಾಡೆಲ್ಸ್ ರವರಿಗೆ ನೊಬೆಲ್ ಪ್ರಶಸ್ತಿ ನೀಡಲಾಯಿತು.
ಕೊಲ್ಕತ್ತ ವಿಶ್ವವಿದ್ಯಾಲಯವು 1905ರಲ್ಲಿ ಪ್ರಥಮವಾಗಿ ಮನೋವಿಜ್ಞಾನ ವಿಭಾಗವನ್ನು ಪ್ರಾರಂಭಿಸಿತು.
1925ರಲ್ಲಿ ‘ಭಾರತೀಯ ಮನೋವಿಜ್ಞಾನ ಸಂಸ್ಥೆ’ ಪ್ರಾರಂಭವಾಯಿತು ಮತ್ತು ಭಾರತೀಯ ಮನೋವಿಜ್ಞಾನ ಪತ್ರಿಕೆ (INDIAN JOURNAL OF PSYCHOLOGY) ಪ್ರಾರಂಭವಾಯಿತು.
1940ರಲ್ಲಿ ಕಲ್ಕತ್ತದಲ್ಲಿ ‘ಲುಂಬಿನಿ ಪಾರ್ಕ್’ ಮಾನಸಿಕ ಆಸ್ಪತ್ರೆಯನ್ನು ಸ್ಥಾಪಿಸಲಾಯಿತು.
1945ರಲ್ಲಿ ರಕ್ಷಣಾ ಸಂಶೋಧನಾ ಕೇಂದ್ರದಲ್ಲಿ ಮನೋವಿಜ್ಞಾನ ಸಂಶೋಧನಾ ವಿಭಾಗವನ್ನು ಆರಂಭಿಸಲಾಯಿತು. ಇದು 1949ರಲ್ಲಿ ರಕ್ಷಣಾ ಸಂಶೋಧನಾ ಕೇಂದ್ರದ ಭಾಗವಾಯಿತು.
1955ರಲ್ಲಿ ಬೆಂಗಳೂರಿನಲ್ಲಿ ನಿಮ್ಹಾನ್ಸ್ ಸ್ಥಾಪನೆಯಾಯಿತು.
1962ರಲ್ಲಿ ‘ಭಾರತೀಯ ಅನ್ವಯಿಕ ಮನೋವಿಜ್ಞಾನ ಅಕಾಡೆಮಿ’ (IAAP) ಸ್ಥಾಪನೆಯಾಯಿತು.
1962ರಲ್ಲಿ ಭಾರತೀಯ ನೈದಾನಿಕ (ಚಿಕಿತ್ಸಕ) ಮನೋವಿಜ್ಞಾನಿಗಳ ಸಂಘವನ್ನು ಸ್ಥಾಪಿಸಲಾಯಿತು.
1989ರಲ್ಲಿ ರಾಷ್ಟ್ರೀಯ ಮನೋವಿಜ್ಞಾನ ಅಕಾಡೆಮಿ (NAOP) ಸ್ಥಾಪಿಸಲಾಯಿತು.
