Commuted Pension Recovery Period under KCSR Rule 376(14): ನಿವೃತ್ತ ಸರ್ಕಾರಿ ನೌಕರರಿಂದ ಪರಿವರ್ತಿತ ಪಿಂಚಣಿ ವಸೂಲಿನ ಅವಧಿ ಕಡಿತಕ್ಕೆ ಮನವಿಗಳು.
Commuted Pension Recovery Period under KCSR Rule 376(14): ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 376 ರಡಿ ಮಂಜೂರು ಮಾಡಲಾಗುವ ಪರಿವರ್ತಿತ ಪಿಂಚಣಿಯ ಮೌಲ್ಯದ ವಸೂಲಿ ಅವಧಿಯನ್ನು ಅದೇ ನಿಯಮದ ಉಪನಿಯಮ (14) ರಲ್ಲಿ 15 ವರ್ಷಕ್ಕೆ ನಿಗಧಿಪಡಿಸಲಾಗಿದೆ.
ಈ ಅವಧಿ ಪೂರ್ಣಗೊಳ್ಳುವ ಮೊದಲೇ ಈ ವಸೂಲಾತಿಯನ್ನು ನಿಲ್ಲಿಸಬೇಕೆಂದೂ, ಈ ಅವಧಿಯನ್ನು ಕಡಿತಗೊಳಿಸಬೇಕೆಂದೂ ನಿವೃತ್ತ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಂಘಗಳಿಂದ ಸರ್ಕಾರಕ್ಕೆ ಅನೇಕ ಮನವಿಗಳು ಬಂದಿರುತ್ತವೆ ಶಾಸನಬದ್ಧ ಚೌಕಟ್ಟು, ನ್ಯಾಯಾಂಗದ ಪೂರ್ವನಿದರ್ಶನಗಳು ಮತ್ತು ಸರ್ಕಾರದ ಸಾಮಾನ್ಯ ನೀತಿಗನುಗುಣವಾಗಿ ಈ ಮನವಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಕೆಳಗಿನ ಸ್ಪಷ್ಟಿಕರಣಗಳು ಮತ್ತು ನಿರ್ದೇಶನಗಳನ್ನು ನೀಡುತ್ತದೆ:
2. ಶಾಸನಬದ್ಧ ವಿಧಾನಗಳು – ಕರ್ನಾಟಕ ನಾಗರಿಕ ಸೇವಾ ನಿಯಮಗಳು:
ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 376 ಪರಿವರ್ತಿತ ಪಿಂಚಣಿಗೆ ಪರಿವರ್ತನೆಗೆ ಸಂಬಂಧಿಸಿದೆ.
ಸರ್ಕಾರಿ ನೌಕರರು ನಿವೃತ್ತಿಯ ಸಂದರ್ಭದಲ್ಲಿ ತಮ್ಮ ಪಿಂಚಣಿಯ ಗರಿಷ್ಟ ಮೂರನೇ ಒಂದು ಭಾಗದವರೆಗೆ ಪರಿವರ್ತನೆ ಮಾಡಿಕೊಂಡು, ನಿಯಮಗಳಡಿ ನಿಗದಿಪಡಿಸಿರುವ ಪರಿವರ್ತನೆ ತಃಖೆ ಪ್ರಕಾರ ಪರಿವರ್ತಿತ ಪಿಂಚಣಿಯ ಇಡಿಗಂಟು ಮೊತ್ತವನ್ನು ಪಡೆಯಬಹುದು.
ನಿಯಮ 376(14) ರಲ್ಲಿ, ಪಿಂಚಣಿಯ ಪರಿವರ್ತಿತ ಭಾಗವನ್ನು, ಪರಿವರ್ತನೆಯ ದಿನಾಂಕದಿಂದ ಹದಿನೈದು ವರ್ಷಗಳ ಅವಧಿ ಮುಗಿದ ನಂತರದ ತಿಂಗಳ ಮೊದಲ ದಿನದಿಂದ ಮರುಸ್ಥಾಪಿಸಬೇಕೆಂದು ವಿಧಿಸಲಾಗಿದೆ.
ಈ ವಿಧಾನವು ಹಲವು ದಶಕಗಳಿಂದ ಜಾರಿಯಲ್ಲಿದ್ದು, ರಾಜ್ಯದಲ್ಲಿ ಪಿಂಚಣಿ ನಿರ್ವಹಣೆಯನ್ನು ನಿಯಂತ್ರಿಸುವ ಕಾನೂನುಬದ್ಧ ಚೌಕಟ್ಟಿನ ಭಾಗವಾಗಿದೆ. ಪಿಂಚಣಿಯ ಪರಿವರ್ತಿತ ಭಾಗವನ್ನು ಮರುಸ್ಥಾಪಿಸಲು 15 ವರ್ಷಗಳ ಅವಧಿಯನ್ನು ನಿಗಧಿಪಡಿಸಿರುವುದು ಪಿಂಚಣಿದಾರರ ಹಿತಾಸಕ್ತಿ ಮತ್ತು ಸರ್ಕಾರದ ಆರ್ಥಿಕ ಸ್ಥಿರತೆಯ ನಡುವಿನ ಸಮತೋಲನವನ್ನು ಕಾಪಾಡುವ ಆರ್ಥಿಕ ಮತ್ತು ಆಡಳಿತಾತ್ಮಕ ಪರಿಗಣನೆಗಳ ಮೇಲೆ ಆಧಾರಿತ ಕ್ರಮವಾಗಿದೆ.
- ಮನವಿಗಳಲ್ಲಿ ಮುಂದಿರಿಸಿದ ವಾದಾಂಶ:
ಸರ್ಕಾರಕ್ಕೆ ಬಂದಿರುವ ಮನವಿಗಳಲ್ಲಿ ಮುಖ್ಯವಾಗಿ ಕೆಳಗಿನ ವಾದಾಂಶಗಳನ್ನು ಮುಂದಿರಿಸಲಾಗಿದೆ:
ಸರಳ ಬಡ್ಡಿ ಲೆಕ್ಕಾಚಾರದ ಪ್ರಕಾರ. ಬಡ್ಡಿಯೊಂದಿಗೆ ಪರಿವರ್ತಿತ ಮೊತ್ತವೂ 15 ವರ್ಷಗಳ ಮುನ್ನವೇ ವಸೂಲಿಯಾಗುತ್ತದೆ ಎಂದು ಹೇಳಲಾಗಿದ್ದು, ಅದರ ನಂತರದ ವಸೂಲಿ ಹೆಚ್ಚುವರಿ ವಸೂಲಿಯಾಗಿದೆ ಎಂದು ತಿಳಿಸಲಾಗಿದೆ.
ಆಯುಷ್ಯಾವಧಿ ಗಣನೀಯವಾಗಿ ಹೆಚ್ಚಿರುವುದರಿಂದ ಮರಣಾಂಶದ ಅಪಾಯ ಕಡಿಮೆಯಾಗಿದೆ.
ಸರಳ ಬಡ್ಡಿ ಅನ್ವಯಿಸಿ, 15 ವರ್ಷ ಪೂರೈಸಿದ ಪಿಂಚಣಿದಾರರಿಗೆ ಪಿಂಚಣಿಯ ಪರಿವರ್ತಿತ ಮೌಲ್ಯವನ್ನು ಮರುಪಾವತಿ ಮಾಡಬೇಕೆಂಬ ಕೋರಿಕೆ ಇರುತ್ತದೆ.
ಪರಿವರ್ತನೆ ಮೌಲ್ಯ ಮತ್ತು ಮರುಸ್ಥಾಪನೆ ಅವಧಿಗೆ ಯಾವುದೇ ಕ್ರಮಬದ್ಧ ಆಧಾರವಿಲ್ಲವೆಂದು ತಿಳಿಸಲಾಗಿದೆ.
- ಮನವಿಗಳ ಪರಿಶೀಲನೆ.
4.1 ನ್ಯಾಯಾಂಗದ ಪೂರ್ವನಿದರ್ಶನಗಳು:
ಪಿಂಚಣಿಯ ಪರಿವರ್ತಿತ ಮೌಲ್ಯವನ್ನು ವಸೂಲಿ ಮಾಡುವ ಅವಧಿಯನ್ನು ಪಿಂಚಣಿದಾರರು ಪ್ರಶ್ನಿಸಿರುವ ವಿಷಯವನ್ನು ಗೌರವಾನ್ವಿತ ಭಾರತದ ಸರ್ವೋಚ್ಚ ನ್ಯಾಯಾಲಯವು ಹಾಗೂ ಮಾನ್ಯ ಉಚ್ಚ ನ್ಯಾಯಾಲಯಗಳು ಅನೇಕ ಬಾರಿ ಪರಿಶೀಲಿಸಿ ತೀರ್ಮಾನಿಸಿವೆ. ಇತ್ತೀಚಿನ ಪ್ರಮುಖ ತೀರ್ಪುಗಳು ಈ ಕೆಳಕಂಡಂತಿವೆ:
ಶೀಲಾ ದೇವಿ ಮತ್ತಿತರರು ವಿರುದ್ಧ ಪಂಜಾಬ್ ರಾಜ್ಯ ಮತ್ತಿತರರು – ಮಾನ್ಯ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 9426/2023 ಹಾಗೂ 379 ಸಂಬಂಧಿತ ಅರ್ಜಿಗಳನ್ನು (ದಿನಾಂಕ 27.11.2024 ಮತ್ತು 4.12.2024 ರಂದು) ಸಮಗ್ರ ಪರಿಶೀಲನೆಯ ನಂತರ ತಳ್ಳಿಹಾಕಿತು.
ಮಾನ್ಯ ಭಾರತದ ಸರ್ವೋಚ್ಚ ನ್ಯಾಯಾಲಯವು – ದಿನಾಂಕ 7.4.2025 ರಂದು, ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಲಾದ ಹಲವು ಮೇಲ್ಮನವಿಗಳನ್ನು ತಳ್ಳಿಹಾಕಿ, ವಿಷಯವನ್ನು ಪಂಜಾಬ್ ರಾಜ್ಯದ ಪರವಾಗಿ ಅಂತಿಮಗೊಳಿಸಿತು.
ಇದೇ ವಿಷಯದ ಕುರಿತು ಈ ಹಿಂದೆಯೂ ಸಹ Forum of Retired IPS Officers v. Union of India ಪ್ರಕರಣದಲ್ಲಿ ಮಾನ್ಯ ದೆಹಲಿ ಉಚ್ಚ ನ್ಯಾಯಾಲಯವು ಮನವಿಗಳನ್ನು ತಳ್ಳಿಹಾಕಿತು.Common Cause v. Union of India (1987) 1 SCC 142 ಪ್ರಕರಣದಲ್ಲಿ ಗೌರವಾನ್ವಿತ ಭಾರತದ ಸರ್ವೋಚ್ಚ ನ್ಯಾಯಾಲಯವು ದಿನಾಂಕ 15.4.2019 ರಂದು ನೀಡಿದ ತೀರ್ಪಿನಲ್ಲಿ ಮರುಸ್ಥಾಪನೆ ಅವಧಿಯನ್ನು 15 ವರ್ಷಗಳಿಗೆ ನಿಗಧಿಪಡಿರುವುದನ್ನು ಎತ್ತಿಹಿಡಿದಿರುವುದಾಗಿದೆ.
ಈ ವಿಷಯವು ಈಗ res judicata (ಈಗಾಗಲೇ ನ್ಯಾಯಾಂಗದಿಂದ ಅಂತಿಮವಾಗಿ ತೀರ್ಮಾನಿಸಲಾದ ವಿಷಯ) ಆಗಿದೆ. ಪಿಂಚಣಿದಾರರು ತಮ್ಮ ಮನವಿಗಳಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಈಗಾಗಲೇ ಸಂವಿಧಾನಿಕ ನ್ಯಾಯಾಲಯಗಳು ಹಲವು ಬಾರಿ ಪರಿಶೀಲಿಸಿ ತಿರಸ್ಕರಿಸಿವೆ.
4.2 ಪರಿವರ್ತಿತ ಪಿಂಚಣಿ ನಿಯಮಗಳನ್ನು ನಿರ್ವಹಿಸುವಲ್ಲಿ ಈ ಕೆಳಕಂಡ ಅಂಶಗಳು ಪರಿಗಣನಾರ್ಹವಾಗಿರುತ್ತದೆ:
ಪಿಂಚಣಿಯ ಪರಿವರ್ತನೆ ಸಂಪೂರ್ಣವಾಗಿ ಆಯ್ಕೆಯಾಧಾರಿತ ಮತ್ತು ಸ್ವಯಂಪ್ರೇರಿತವಾಗಿದೆ. ಯಾವುದೇ ಸರ್ಕಾರಿ ನೌಕರನನ್ನು ಅವರ ಪಿಂಚಣಿಯನ್ನು ಪರಿವರ್ತಿಸಲು ಒತ್ತಾಯಿಸಲಾಗುವುದಿಲ್ಲ; ಪಿಂಚಣಿದಾರರು ಪಿಂಚಣಿ ಪರಿವರ್ತನೆಯನ್ನು ನಿರಾಕರಿಸಿ ಪೂರ್ಣ ಮಾಸಿಕ ಪಿಂಚಣಿ ಪಡೆಯಬಹುದು.
ಪಿಂಚಣಿ ಪರಿವರ್ತಿಸಲು ನಿಗಧಿಪಡಿಸಿದ ಗರಿಷ್ಠ ಮಿತಿಗೊಳಪಟ್ಟು ಪಿಂಚಣಿದಾರರು ಇಚ್ಛಾನುಸಾರ ಪಿಂಚಣಿಯ ಯಾವುದೇ ಭಾಗವನ್ನು ಪರಿವರ್ತಿಸಬಹುದು;
ನಿವೃತ್ತಿಯ ನಂತರದ ದಿನಾಂಕಕ್ಕೆ ನಿರ್ಧಾರವನ್ನು ಮುಂದೂಡಬಹುದು.
ಪಿಂಚಣಿ ವರಿವರ್ತನೆ ಆಯ್ಕೆ ಮಾಡುವಾಗ, ಪಿಂಚಣಿದಾರರು 15 ವರ್ಷಗಳ ಮರುಸ್ಥಾಪನೆ ಅವಧಿ ಸೇರಿದಂತೆ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡು ಆಯ್ಕೆ ಮಾಡುತ್ತಾರೆ.
ಆದ್ದರಿಂದ ಸ್ವಯಂಪ್ರೇರಿತವಾಗಿ, ಇಡಿಗಂಟು ಮೊತ್ತದ ಲಾಭವನ್ನು ಪಡೆದುಕೊಂಡ ನಂತರ, ನಿಯಮಗಳಲ್ಲಿನ ನಿಬಂಧನೆಗಳನ್ನು ಬದಲಾಯಿಸುವಂತೆ ಕೋರುತ್ತಿರುವುದು ಸಮಂಜಸವಲ್ಲ.
4.3 ನಿಯಮ 376(14) ರಡಿ ಪಿಂಚಣಿ ಪರಿವರ್ತನೆಯ ಪ್ರಯೋಜನೆಗಳು.
ಕರ್ನಾಟಕ ನಾಗರಿಕ ಸೇವಾ ನಿಯಮ 376 ರ ಮೂಲಕ ಪಿಂಚಣಿದಾರರಿಗೆ ಅನೇಕ ಲಾಭಗಳು ಲಭ್ಯವಾಗಿವೆ. ತಕ್ಷಣದ ಇಡಿಗಂಟು ಮೊತ್ತದ ಲಾಭವನ್ನು ಪಡೆದು, ಇದನ್ನು ಯಾವುದೇ ತುರ್ತು ಸನ್ನಿವೇಶಕ್ಕಾಗಲೀ ಅಥವಾ ಹೂಡಿಕೆಯ ಮೂಲಕ ಹೆಚ್ಚಿನ ಆದಾಯ ಪಡೆಯುವ ಉದ್ದೇಶಕ್ಕಾಗಲೀ ಉಪಯೋಗಿಸಬಹುದು. ಮುಂದುವರೆದು, ಪರಿವರ್ತಿತ ಪಿಂಚಣಿಯ ಮೊತ್ತಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ಪ್ರಯೋಜನ ನೀಡಲಾಗಿದೆ.
4.4 ಸರಳ ಬಡ್ಡಿ ಲೆಕ್ಕಾಚಾರ ಸಮಂಜಸವಾಗಿರುವುದಿಲ್ಲ:
▪️ ಪಿಂಚಣಿದಾರರು ಸರಳ ಬಡ್ಡಿ ಲೆಕ್ಕಾಚಾರ ಮಾಡಿ, ವಸೂಲಿ ಅವಧಿಯನ್ನು 10 ವರ್ಷ 8 ತಿಂಗಳು ಅಥವಾ 11 ವರ್ಷ 3 ತಿಂಗಳು ಅಥವಾ 12 ವರ್ಷಗಳಿಗೆ ನಿಗಧಿಪಡಿಸಬೇಕೆಂದು ಕೋರಿರುತ್ತಾರೆ. ಆದರೆ, ನಿಯಮ 376(14) ರಲ್ಲಿನ ಅವಧಿಯು ಸರಳ ಬಡ್ಡಿ ಲೆಕ್ಕಾಚಾರದನ್ವಯ ನಿರ್ಧರಿತ ಅವಧಿಯಾಗಿರುವುದಿಲ್ಲ.
▪️ ಸರಳ ಬಡ್ಡಿ ಅನ್ವಯಿಸುವ ಲೆಕ್ಕಾಚಾರಗಳು ಇಡಿಗಂಟು ಮೊತ್ತದ ಹೂಡಿಕೆ ಆದಾಯವನ್ನು ಪರಿಗಣಿಸುವುದಿಲ್ಲ.
▪️ ತೆರಿಗೆ ವಿನಾಯಿತಿಯನ್ನು ಕಡೆಗಣಿಸುತ್ತವೆ.
▪️ ಸರಳ ಬಡ್ಡಿ ಲೆಕ್ಕಾಚಾರ ಮಾಡಿದಲ್ಲಿ ಅದು ಹಣದ ಮೌಲ್ಯವು ಕಾಲಕ್ರಮೇಣ ಕಡಿಮೆಯಾಗುವುದನ್ನು ಕಡೆಗಣಿಸಿದಂತಾಗುತ್ತದೆ.
▪️ ಇದು ಮರಣಾಂಶ ಹಾಗೂ ಇತರೆ (Actuarial) ಅಪಾಯಗಳನ್ನು ಪರಿಗಣಿಸುವುದಿಲ್ಲ.
▪️ ಸರ್ಕಾರದ ಯಾವುದೇ ನೀತಿಯು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರತಕ್ಕದ್ದು. ಸರಳ ಬಡ್ಡಿ ಲೆಕ್ಕಾಚಾರ ಮಾಡುವುದರಿಂದ ರಾಜ್ಯದ ಬೊಕ್ಕಸದ ಮೇಲೆ ವ್ಯತಿರಿಕ್ತ ಹಣಕಾಸು ಪರಿಣಾಮ ಉಂಟಾಗುತ್ತದೆ.
▪️ ಈ ಅಂಶಗಳನ್ನು ಪಿಂಚಣಿದಾರರು ತಮ್ಮ ಮನವಿಗಳಲ್ಲಿ ಕಡೆಗಣಿಸಿರುತ್ತಾರೆ.
ಸರ್ಕಾರವು ಬಡ್ಡಿಯೊಂದಿಗೆ ಹಣ ವಸೂಲಿ ಮಾಡುತ್ತಿಲ್ಲ: ಪರಿವರ್ತನೆಯ ಸಮಯದಲ್ಲಿ ಇಡಿಗಂಟು ಮೊತ್ತವನ್ನು ಈಗಾಗಲೇ ನೀಡಿರುವುದರಿಂದ 15 ವರ್ಷಗಳ ಕಾಲ ಪಿಂಚಣಿಯ ಪರಿವರ್ತಿತ ಭಾಗವನ್ನು ಪಿಂಚಣಿದಾರರಿಗೆ ನೀಡುವುದಿಲ್ಲ. ಪಿಂಚಣಿಯ ಪರಿವರ್ತನೆ ಯಿಂದ ಪಾವತಿಸುವ ಇಡಿಗಂಟು ಮೊತ್ತಕ್ಕಾಗಿ ಸರ್ಕಾರ ಸಾಕಷ್ಟು ಆರ್ಥಿಕ ಹೋರೆಯನ್ನು ಎದುರಿಸುತ್ತದೆ.
4.5 ಪಿಂಚಣಿ ನಿಯಮ ಸರ್ಕಾರದ ನೀತಿ ನಿರ್ಣಯವಾಗಿರುತ್ತದೆ.
ನ್ಯಾಯಾಂಗ ಪರಿಶೀಲನೆಯು ನಿಯಮಗಳಿಗೆ ವ್ಯತಿರಿಕ್ತ ಕ್ರಮವನ್ನು ತಳ್ಳಿಹಾಕುವುದಕ್ಕೆ ಮಾತ್ರ ಸೀಮಿತಗೊಂಡಿದ್ದು, ಪಿಂಚಣಿ ಮತ್ತು ಪರಿವರ್ತಿತ ಪಿಂಚಣಿ ಇವು ಸರ್ಕಾರದ ಸಾಮಾನ್ಯ ನೀತಿಯ ವಿಷಯಗಳಾಗಿರುವುದರಿಂದ ಇದರಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದಿಲ್ಲವೆಂದು ನ್ಯಾಯಾಲಯಗಳು ಆಗ್ಗಿಂದಾಗ್ಗೆ ಎತ್ತಿಹಿಡಿದಿವೆ. ನಿಯಮ 376(14)ರಡಿಯಲ್ಲಿ ನಿಗದಿಪಡಿಸಿರುವ 15 ವರ್ಷದ ಅವಧಿ ದೃಢವಾದ ಹಣಕಾಸು ಮತ್ತು ಆಡಳಿತಾತ್ಮಕ ತತ್ವಗಳ ಮೇಲೆ ಆಧಾರಿತವಾಗಿದೆ ಮತ್ತು ಸಂವಿಧಾನಿಕ ನ್ಯಾಯಾಲಯಗಳಿಂದ ಹಲವು ಬಾರಿ ಮಾನ್ಯತೆ ಪಡೆದಿದೆ.
4.6 ಇತರ ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮವನ್ನು ಪೂರ್ವನಿದರ್ಶನವಾಗಿ ಉಲ್ಲೇಖಿಸಿರುವುದು.
ಕೆಲವು ಪಿಂಚಣಿದಾರರು ಇತರ ರಾಜ್ಯ ಸರ್ಕಾರಗಳು ಮರುಸ್ಥಾಪನಾ ಅವಧಿಯನ್ನು ಕಡಿತಗೊಳಿಸಿರುವ ಉದಾಹರಣೆಗಳನ್ನು ಪೂರ್ವನಿದರ್ಶನವಾಗಿ ಉಲ್ಲೇಖಿಸಿ, ಕರ್ನಾಟಕವೂ ಅದನ್ನು ಅನುಸರಿಸಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಇದನ್ನು ಒಪ್ಪಲು ಸಾಧ್ಯವಿಲ್ಲ, ಏಕೆಂದರೆ ಕರ್ನಾಟಕ ರಾಜ್ಯವು ತನ್ನ ವಿಶಿಷ್ಟ ಆರ್ಥಿಕ ಸ್ಥಿತಿ ಮತ್ತು ಇತರ ಸಂಬಂಧಿತ ಅಂಶಗಳನ್ನು ಆಧರಿಸಿ ತನ್ನದೇ ನೀತಿಗಳನ್ನು ರೂಪಿಸಲು ಸಕ್ಷಮವಾಗಿರುತ್ತದೆ. ಕರ್ನಾಟಕ ನಾಗರಿಕ ಸೇವಾ ನಿಯಮ 376(14) ಏಕಪಕ್ಷೀಯ, ಅಸಂಗತ ಅಥವಾ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಯಾವುದೇ ನ್ಯಾಯಾಲಯವೂ ಅವಲೋಕಿಸಿರುವುದಿಲ್ಲ.
5. ಈ ಹಿನ್ನೆಲೆಯಲ್ಲಿ ನಿಯಮ 376(14) ರಲ್ಲಿನ 15 ವರ್ಷದ ಮರುಸ್ಥಾಪನೆ ಅವಧಿಯನ್ನು ಮುಂದುವರಿಸುವುದು ಈ ಕೆಳಗೆ ನಮೂದಿಸಿರುವ ಕಾರಣಗಳಿಂದ ನ್ಯಾಯಸಮ್ಮತವಾಗಿರುತ್ತದೆ:
▪️ ಪರಿವರ್ತಿತ ಪಿಂಚಣಿ ಕುರಿತು ನಿಯಮಗಳು ಸಮಗ್ರ ಪರಿಶೀಲನೆಯ ನಂತರ ಸರ್ಕಾರ ರೂಪಿಸಿರುವ ನೀತಿಯಾಗಿದೆ.
▪️ ಇದು ಕಾನೂನುಬದ್ಧ ನಿಯಮವಾಗಿದ್ದು, ಇದನ್ನು ಯಾವುದೇ ನ್ಯಾಯಾಲಯವು ತಳ್ಳಿಹಾಕಿರುವುದಿಲ್ಲ.
▪️ ಪರಿವರ್ತಿತ ಪಿಂಚಣಿಯನ್ನು ಪಡೆಯುವುದು ಐಚ್ಛಿಕವಾಗಿರುತ್ತದೆ.
▪️ ಇದರಿಂದ ಪಿಂಚಣಿದಾರರಿಗೆ ಹಲವು ಪ್ರಯೋಜನಗಳು ಲಭ್ಯವಾಗುತ್ತವೆ.
▪️ ನಿಯಮದಲ್ಲಿನ ನಿಬಂಧನೆಗಳು ರಾಜ್ಯದ ಆರ್ಥಿಕ ಸ್ಥಿರತೆಯನ್ನು ಕಾಪಾಡುತ್ತದೆ.
1. ಈ ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಕ್ಕೆ ಬಂದಿರುವ ಎಲ್ಲಾ ಮನವಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಚಾಲ್ತಿಯಲ್ಲಿರುವ ಶಾಸನಬದ್ಧ ನಿಯಮಗಳು, ನ್ಯಾಯಾಂಗ ತೀರ್ಪುಗಳು, ದೃಢವಾದ ಆರ್ಥಿಕ ತತ್ವಗಳು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವ್ಯತಿರಿಕ್ತವಾಗಿರುವ ಈ ಬೇಡಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ.
ಆದುದರಿಂದ, ಎಲ್ಲ ಇಲಾಖಾ ಮುಖ್ಯಸ್ಥರು, ಖಜಾನೆ ಅಧಿಕಾರಿಗಳು ಮತ್ತು ಪಿಂಚಣಿ ವಿತರಣೆ ಪ್ರಾಧಿಕಾರಗಳಿಗೆ ಕೆಳಕಂಡ ಸೂಚನೆಗಳನ್ನು ನೀಡಲಾಗಿದೆ:
ಪರಿವರ್ತಿತ ಪಿಂಚಣಿಯ ಮೊತ್ತವನ್ನು ವಸೂಲಿ ಮಾಡುವಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 376(14) ರಲ್ಲಿನ ಹಾಲಿ ಪ್ರಚಲಿತ ವಿಧಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಪಿಂಚಣಿಯ ಪರಿವರ್ತಿತ ಮೊತ್ತವನ್ನು ನಿರ್ಧರಿತ ಅವಧಿ ಪೂರ್ಣಗೊಂಡ ನಂತರವೇ ಮರುಸ್ಥಾಪಿಸತಕ್ಕದ್ದು: ನಿಗಧಿತ ಅವಧಿಯ ಮುನ್ನ ಮರುಸ್ಥಾಪನೆಗೆ ಅನುಮತಿಸಬಾರದು.
ಈಗಾಗಲೇ ವಸೂಲಿಯಾದ ಮೊತ್ತವನ್ನು ಮರುಪಾವತಿಸತಕ್ಕದ್ದಲ್ಲ.
ಪಿಂಚಣಿಯ ಪರಿವರ್ತಿತ ಮೊತ್ತದ ವಸೂಲಿಯನ್ನು ನಿಲ್ಲಿಸುವಂತೆ ಅಥವಾ ವಸೂಲಿಯ ಅವಧಿಯನ್ನು ಕಡಿತಗೊಳಿಸುವಂತೆ ಸ್ವೀಕೃತವಾಗುವ ಮನವಿಗಳನ್ನು ಈ ಸುತ್ತೋಲೆಯ ಆಧಾರದ ಮೇಲೆನ ಅಂಶಗಳೊಂದಿಗೆ ವಿವರವಾದ ಹಿಂಬರಹವನ್ನು ಹೊರಡಿಸಿ ತಿರಸ್ಕರಿಸಬೇಕು;
ಮಾನ್ಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಈ ಸುತ್ತೋಲೆಯ ಆಧಾರದ ಮೇಲೆ ಸೂಕ್ತ ಹೇಳಿಕೆಯನ್ನು ಸಲ್ಲಿಸುವುದು. ಮಾನ್ಯ ನ್ಯಾಯಾಲಯಗಳಲ್ಲಿ ದಾಖಲಾದ ಹಲವು ಅರ್ಜಿಗಳಲ್ಲಿ ಮಾನ್ಯ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ಮೇಲೆ ಉಲ್ಲೇಖಿಸಿ ಪ್ರಕರಣದಲ್ಲಿನ ಮಧ್ಯಾಂತರ ಆದೇಶವನ್ನು ಮಾತ್ರ ಪ್ರಸ್ತಾಪಿಸಿ ವಸೂಲಿಯನ್ನು ತಡೆಹಿಡಿಯಲು ಮಧ್ಯಾಂತರ ಆದೇಶ ಪಡೆಯುತ್ತಿರುವುದಾಗಿದೆ.
ಮಾನ್ಯ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯವು ತನ್ನ ಪ್ರಕರಣದಲ್ಲಿ ದಿನಾಂಕ 27.11.2024 ರಂದು ಅಂತಿಮ ತೀರ್ಪನ್ನು ನೀಡಿರುವ ಅಂಶವನ್ನು ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಅದನ್ನು ದಿನಾಂಕ 7.4.2025 ರ ತೀರ್ಪಿನಲ್ಲಿ ಸ್ಥಿರೀಕರಿಸಿದ ಅಂಶವನ್ನು ಮಾನ್ಯ ನ್ಯಾಯಾಲಯದ ಗಮನಕ್ಕೆ ತಂದು ರಾಜ್ಯ ಸರ್ಕಾರದ ಪರವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಆಡಳಿತ ಇಲಾಖೆಗಳು ಕ್ರಮ ಕೈಗೊಳ್ಳತಕ್ಕದ್ದು.
ನ್ಯಾಯಾಲಯದ ಮಧ್ಯಂತರ ಅದೇಶಗಳಿಂದ ವಸೂಲಿ ನಿಲ್ಲಿಸಿದ್ದಲ್ಲಿ, ಪ್ರಕರಣಗಳು ಅಂತ್ಯಗೊಂಡ ನಂತರ ನ್ಯಾಯಲಯದ ತೀರ್ಪಿಗೆ ಒಳಪಟ್ಟು ತಕ್ಷಣ ಪುನರಾರಂಭಿಸತಕ್ಕದ್ದು.
